Tuesday 6 August 2013

ಬಾಲ್ಯ

ಎಷ್ಟೊಂದು ಮಧುರ ಆ ಬಾಲ್ಯದ ನೆನಪು,
ಬೆಳೆದಂತೆ ಮಾಯವಾಗುತ್ತಿದೆ ಅಷ್ಟೊಂದು ಹೊಳಪು.

ಬೇಡ ಬೇಡ ಎಂದರೂ ಮುದ್ದಿಸಿ ಒತ್ತಾಯಿಸಿ ಊಟ ತಿನ್ನಿಸುತ್ತಿದ್ದಳು ಅಮ್ಮ,
ಈಗ ಮನೆಯಿಂದ ಕೊಂಚ ದೂರ ಬಂದಿರುವುದರಿಂದ ಕಾಡುತ್ತಿದೆ ಏಕಾಂಗಿಯೆಂಬ ಗುಮ್ಮ.

ಅದೆಷ್ಟೋ ಖುಷಿ ಅಮ್ಮನ ಕಣ್ಣು ತಪ್ಪಿಸಿ ಮನೆ ಹಿಂದಿನ ನದಿಗೆ ಆಗಾಗ ಈಜಲು ತೆರಳಿದ್ದು,
ನೆನೆದರೆ ಈಗಲೂ ಬೆಚ್ಚಿಬೀಳುತ್ತೇನೆ ನಾ ಒಮ್ಮೆ ಸುಳಿಯಲ್ಲಿ ಸಿಲುಕಿದ್ದು.

ಹುಟ್ಟು ತರ್ಲೆ ನಾನು ಆಗೆಲ್ಲಾ ಮಾಡುತ್ತಿದ್ದೆ ತುಂಬಾನೇ ಮೋಜು,
ಇಂದೇಕೋ ಗೊತ್ತಿಲ್ಲ ಬೆಳೆಯುತ್ತಿದ್ದೇನೆ ನಾನು ಅಡಗಿದೆ ನನ್ನೆಲ್ಲಾ ಗೌಜು.

ಅನಿಸಿದ್ದೆಲ್ಲವನ್ನು ಆಗ ಒಮ್ಮೆಯಾದರೂ ಪ್ರಯತ್ನಿಸುವ ಗೀಳು,
ಈಗಲೂ ಅನಿಸುತ್ತೆ ಯಾವನಿಗೆ ಬೇಕು ಆ ಗೋಳು.

ಆ ಮುಗ್ದ ಅರಿವಿರದ ಬಾಲ್ಯದ ಶಾಲಾ ದಿನಗಳು ಆಗಿತ್ತು ತುಂಬಾ ಸಿಹಿ,
ಈ ಎಲ್ಲಾ ತಿಳಿದಿರುವ ಯೌವನದ ಕಾಲೇಜು ಕಛೇರಿ ದಿನಗಳು ಅಲ್ಲಲ್ಲಿ ಕಹಿ.

ಎಷ್ಟೊಂದು ಮಧುರ ಆ ಬಾಲ್ಯದ ನೆನಪು,
ಬೆಳೆದಂತೆ ಮಾಯವಾಗುತ್ತಿದೆ ಅಷ್ಟೊಂದು ಹೊಳಪು.

-
ಹರ್ಷ ಹೆಮ್ಮಾಡಿ.

No comments:

Post a Comment