Saturday 9 August 2014

ಸಲಿಗೆ

ನಾನು ಮೂಗ ಅವಳು ಕಿವುಡಿ,
ಮೌನವೇ ನಮ್ಮ ಆಡುನುಡಿ.

ಇದ್ದರಿಂದ ಸಂವಹನ ಅಂತರ,
ಭಾವನೆಗಳ ದಹನ ನಂತರ.

ಹೇಳುವ ಯುಕ್ತಿ ನನ್ನಲ್ಲಿರಲಿಲ್ಲ,
ಕೇಳುವ ಆಸಕ್ತಿ ಅವಳಿಗಿರಲಿಲ್ಲ.

ಆಗಿದ್ದೆಲ್ಲಾ ಯತ್ನದ ಸುಲಿಗೆ,
ಹುಟ್ಟಲಿಲ್ಲ ಕೊನೆಗೂ ಸಲಿಗೆ.

- ಹರ್ಷ ಹೆಮ್ಮಾಡಿ.

Saturday 12 July 2014

ಮಾಲಿ

ಅದೆಷ್ಟೋ ಅತ್ತಿದ್ದೇನೆ ನೀನಿಲ್ಲವೆಂದು ಹತ್ತಿರ,
ಅಳುವಿಗೆ ಕಂಡುಕೊಂಡೆ ನನ್ನದೇ ಉತ್ತರ.

ವಾಸ್ತವದ ನೆಡೆಗೆ ನೀ ಒಡ್ದಿರಬಹುದು ತಡೆ,
ಆದರೆ ಕನಸಲ್ಲಿ ನಾನು ನೆಡೆದಿದ್ದೇ ನೆಡೆ.

ನನ್ನವಳನಾಗುವೆ ನೀನು ನಿದ್ದೆ ಆವರಿಸಲು,
ಮುಕ್ತ ನಾನು ಕನಸಲ್ಲಿ ನಿನ್ನ ಆರಾಧಿಸಿಲು.

ಹಾಕುವೆಯಾ ನೀನು ಕನಸಿಗೂ ಬೇಲಿ,
ನಿನಗಲ್ಲದಿದ್ದರೂ ಕನಸಿಗೆ ನಾನು ಮಾಲಿ.

- ಹರ್ಷ ಹೆಮ್ಮಾಡಿ.

Tuesday 8 July 2014

ನೀನಾಗಿ

ಬೀಸು ನನ್ನತ್ತ ಬೀಸುವ ತಂಗಾಳಿ ನೀನಾಗಿ,
ಸುಳಿಬೇಡ ನನ್ನತ್ತ ಸುಂಟರಗಾಳಿ ನೀನಾಗಿ.

ನಡುಗಿಸು ನನ್ನ ಹಿತವಾದ ಚಳಿ ನೀನಾಗಿ,
ಸುಡಬೇಡ ನನ್ನ ಸುಡುವ ಬಿಸಿಲು ನೀನಾಗಿ.

ಸುರಿ ನನ್ಮೇಲೆ ತುಂತುರುಮಳೆ ನೀನಾಗಿ,
ಸುರಿಯದಿರು ನನ್ಮೇಲೆ ಆಮ್ಲಮಳೆ ನೀನಾಗಿ.

ಬಾ ನನ್ನ ಬಾಳಲ್ಲಿ ಬೆಳದಿಂಗಳು ನೀನಾಗಿ,
ಬರದಿರು ಎಂದೆಂದೂ ಕಗ್ಗತ್ತಲು ನೀನಾಗಿ.

- ಹರ್ಷ ಹೆಮ್ಮಾಡಿ.

Sunday 6 July 2014

ನೆನಪುಗಳು

ನಿನ್ನ ಇರುವಿಕೆಯೆಲ್ಲಾ ಇಂದು ಬರೀ ನೆನಪುಗಳು,
ಮರುಕಳಿಸಬಾರದೇಕೆ ಅಂದನಿಸುತ್ತದೆ ಆ ದಿನಗಳು.

ಎಂದೂ ಮರೆಯಲಾಗದ ಕ್ಷಣಗಳವು ನಿನ್ನೊಡನೆ ನಕ್ಕಿದ್ದು,
ನಿನ್ನ ತುಟಿಗಂಟಿದ ಚೋಕೋಲೇಟನ್ನು ನಾನು ನೆಕ್ಕಿದ್ದು.

ಸನಿಹವಿದ್ದರೆ ನೀನು ನನ್ನ ನೋವುಗಳ ಸಾವು,
ಮರೆತಿದ್ದೆ ನನ್ನೇ ಚಿನ್ನ ಜೊತೆಯಾಗಿದ್ದಾಗ ನಾವು.

ಗೊತ್ತಿರಲಿಲ್ಲ ನನಗೆ ಪ್ರೀತಿಗಿರಬೇಕೆಂದು ರೀತಿ ನೀತಿ,
ದೂರಮಾಡುವಷ್ಟು ವಿಪರೀತವಾಗಿತ್ತೇ ನನ್ನ ಪ್ರೀತಿ.

- ಹರ್ಷ ಹೆಮ್ಮಾಡಿ.

Thursday 3 July 2014

ದುಂಬಿ

ತನ್ನಷ್ಟಕ್ಕೆ ತಾನು ಎತ್ತಲೋ ಹೊರಟಿದ್ದ ಆ ದುಂಬಿ,
ಕಂಡಿತೊಂದು ಮಲ್ಲಿಗೆಯನ್ನು ಅದಾಗಷ್ಟೇ ಅರಳಿತ್ತು ಮೈತುಂಬಿ.

ಎಂದೂ ಇರದ ಕಾಂತಿಯಿಂದ ಕೂಡಿತ್ತು ಅಂದು ಆ ಮಲ್ಲಿಗೆ,
ಕಾಂತಿಯ ಭ್ರಾಂತಿಯಿಂದ ದುಂಬಿ ಬಂದು ಕೂತಿತು ಮೆಲ್ಲಗೆ.

ಮಲ್ಲಿಗೆಯ ಸಾಂಗತ್ಯದಲ್ಲಿ ದುಂಬಿ ತನ್ನ ಮೈಮರೆತಿತ್ತು,
ಮಲ್ಲಿಗೆ ಮತ್ತು ದುಂಬಿಯ ಜೀವ ಹೂ ಕಿತ್ತವನ ಕೈಯಲ್ಲಿತ್ತು.

ಅಂತ್ಯ ಹೀಗಿರುತ್ತದೆಂದು ಹೇಗೆ ತಾನೇ ತಿಳಿದಿರಬೇಕು ದುಂಬಿಗಾಗಲಿ,
ಬದುಕುಳಿಯತಿತ್ತೇನೋ ಹೋಗಿದ್ದರೆ ದುಂಬಿ ಮಲ್ಲಿಗೆಯನ್ನಗಲಿ.

- ಹರ್ಷ ಹೆಮ್ಮಾಡಿ.

Sunday 15 June 2014

ಮಾಯೆ

ಕಾರಣವಿಲ್ಲದೆ ಇಷ್ಟವಾದ ಅವಳೊಂದು ಮಾಯೆ,
ಬಿಡದೇ ಕಾಡುತ್ತಿದೆ ಅವಳ ನೆನಪಿನ ಛಾಯೆ.

ಮೂಗ ನಾನು ಅವಳು ನನ್ನೆದುರಿರುತ್ತಿದ್ದಷ್ಟೂ ಹೊತ್ತು,
ಕೇಳಿಸಲೇ ಇಲ್ಲ ಅವಳಿಗೆ ನನ್ನ ಮನದ ಮಾತು,

ಪ್ರಪಂಚದಲ್ಲಿ ಅವಳೊಬ್ಬಳೇ ಕಾಣುತ್ತಿದ್ದ ಸಮಯವದು,
ಉಳಿದವರು ಕಾಣಿಸಿದ್ದು ಇನ್ನೊಬ್ಬನಿಗೆ ಅವಳಾದ್ಮೇಲೆ ವಧು.

ನನ್ನ ಪ್ರೀತಿ ಅವಳ ಮನತಟ್ಟಿದ್ದು ಕನಸು,
ಆದರೆ ಕೊನೆಗೆ ಕೈಕೊಟ್ಟಿದ್ದು ಮಾತ್ರ ನನಸು.

- ಹರ್ಷ ಹೆಮ್ಮಾಡಿ.

Friday 9 May 2014

ಹರ್ಷ ಉವಾಚ-೧೬

"ನಿನ್ನ ಜೀವನದ ಸಾಧನೆ ಅವಲಂಬಿತವಾಗಿರುವುದು ನೀನು ಜೀವನವನ್ನು ನೋಡುವ ಪರಿಯಲ್ಲಿ."

-ಹರ್ಷ ಹೆಮ್ಮಾಡಿ.

Sunday 27 April 2014

ಹರ್ಷ ಉವಾಚ-೧೫

"ಮನುಷ್ಯನಿಗೆ ಪೂರ್ತಿ ಒಳ್ಳೆಯವನೂ ಅಥವಾ ಪೂರ್ತಿ ಕೆಟ್ಟವನೂ ಆಗಲು ಸಾಧ್ಯವಿದ್ದಿದ್ದರೆ ದೇವರು ಮತ್ತು ರಾಕ್ಷಸ ಎಂಬ ಮತ್ತೆರಡು ಪದಗಳು ಇರುತ್ತಿರಲಿಲ್ಲ."

- ಹರ್ಷ ಹೆಮ್ಮಾಡಿ.

Saturday 19 April 2014

ಹರ್ಷ ಉವಾಚ-೧೪

"ಅಚ್ಚರಿಗಳೆಲ್ಲವೂ ನಮ್ಮ ಕಣ್ಣಳತೆಯ ದೂರದಲ್ಲೇ ಇರುತ್ತವೆ, ನಾವದನ್ನು ಕಣ್ಣರಳಿಸಿ ನೋಡಬೇಕಷ್ಟೆ."

-ಹರ್ಷ ಹೆಮ್ಮಾಡಿ.

Saturday 12 April 2014

ಮೊಬೈಲ್

ಎಲ್ಲಾ ಸಮ ಇದ್ದಿತ ಇದ್ದಳಿಕೆ ಮನಿಗೊಂದೊಂದೇ ದೂರವಾಣಿ,
ಈಗ ಎಲ್ಲಾರ್ ಕೈಯಾಗೂ ಮೊಬೈಲ್ ಬಂದ್ ಹೀಂಗಾಯ್ತ್ ಕಾಣಿ.

ಇದ್ದದ್ ಇದ್ದಂಗ್ ಹೇಳ್ದನಿಗೆ ಎದ್ಬಂದ್ ಎದಿಮ್ಯಾಲ್ ಒದ್ರಂಬ್ರ,
ಇಲ್ದಿದ್ ಅಲ್ದಿದ್ ಹೇಳ್ದನಿನೇ ತಲಿಮ್ಯಾಲ್ ಹೊತ್ಕಂಡ್ ಕೊಣ್ದ್ರಂಬ್ರ.

ಪಕ್ದಾಗಿದ್ರೂ ಬಾಯ್ಫ್ರೆಂಡ ಅವ್ಳ ನನ್ನೇ ಕಾಂತಿದ್ದಳ,
ಹ್ಯಾಂಗೋ ನಂಬ್ರು ತಕಂಡ್ ಕಾಲ್ ಮಾಡಿ ಬ್ಯಾರೇ ಕಾಡ್ತಿದ್ದಳ.

ಒಂದಿನ ಅವ್ಳಪ್ನಿಗೇಳ್ದೇ ನಿಮ್ಮಗ್ಳ ಹೀಂಗೆಲ್ಲಾ ಮಾಡ್ತಾಳಂದೇಳಿ,
ನನ್ನೇ ಅವ ಬೆರ್ಸ್ಕಂಡ್ ಬಪ್ಪುದಾ ನೀನೇ ನನ್ಮಗ್ಳ ತಲಿಕೆಡ್ಸದಂದೇಳಿ.

- ಹರ್ಷ ಹೆಮ್ಮಾಡಿ.

Sunday 6 April 2014

ಹರ್ಷ ಉವಾಚ-೧೩

"ಎಲ್ಲರಲ್ಲಿಯೂ ಸಮಾನ ಸಾಮರ್ಥ್ಯವಿರುತ್ತದೆ, ಆದರೆ ಅವರವರ ಯೋಗ್ಯತೆ ಮಾತ್ರ ಹುಟ್ಟಿ ಬೆಳೆದ ವಾತಾವರಣ ಮತ್ತು ಆಸಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ".

-ಹರ್ಷ ಹೆಮ್ಮಾಡಿ.

Thursday 3 April 2014

ಹೊಸ ಅನುಭವ

ನೆನಪಾಗಲು ನೀನು ನನ್ನಲ್ಲೇನೋ ಹೊಸ ಕಾಂತಿ,
ಮೋಡಗಳ ಮಧ್ಯೆ ನಾವಿಬ್ಬರು ಕುಣಿಯುವ ಭ್ರಾಂತಿ.

ನಾ ತೊಡುವ ಬಟ್ಟೆ ನೀನಾಗಿ ನನ್ನ ಅಪ್ಪಿದಂತೆ,
ನಾ ನಡೆವ ಹಾದಿಯಲ್ಲಿ ನೆರಳಾಗಿ ಹಿಂಬಾಲಿಸಿದಂತೆ.

ಕಾಣುವವರೆಗೂ ನಿನ್ನ ಅದೇನೋ ಹೇಳುವ ತುಡಿತ,
ನೀ ಬಳಿ ಬಂದರೆ ಸಾಕು ಹಿಡಿತವಿಲ್ಲದ ಎದೆಬಡಿತ.

ಏನೋ ಗೊತ್ತಿಲ್ಲ ಒಂಥರಾ ಹೊಸ ಅನುಭವ ನನಗೆ,
ಹೇಳು ಚಿನ್ನ ಹೀಗೇನಾದರೂ ಅನಿಸುತ್ತಿದೆಯಾ ನಿನಗೆ.


- ಹರ್ಷ ಹೆಮ್ಮಾಡಿ.

Monday 31 March 2014

ಮುಗುಳು ನಗೆ

ಅವಳ ಒಂದು ಮುಗುಳು ನಗೆ,
ಮೂಡಿಸುವುದು ಬಯಕೆ ಹಲವು ಬಗೆ.

ಸ್ವರ್ಗಕ್ಕೂ ಮಿಗಿಲಾದದ್ದು ಅವಳ ಸನಿಹ,
ಅದನ್ಯಾರಲ್ಲಿಯೂ ಕಂಡಿಲ್ಲ ಅವಳ ವಿನಹ.

ಅವಳ ಮೈಮಾಟ ಕುಂದಾಪುರದ ಮೀನು,
ಅವಳೇ ನನ್ನ ಮನೆ ಮನದ ರಾಣಿ ಜೇನು.

ಹೃದಯ ಮಿಡಿಯುತ್ತಿದೆ ಅವಳದೇ ಹೆಸರು,
ಅವಳಗಲಿದರೆ ಇರದು ನನ್ನ ಉಸಿರು.


- ಹರ್ಷ ಹೆಮ್ಮಾಡಿ.

Wednesday 26 March 2014

ಏಳಿಗೆ

ನಿನ್ನ ಕೈಯಲ್ಲಿದೆ ನಿನ್ನ ಏಳಿಗೆ,
ನೀನೇ ಹೊಣೆ ನಿನ್ನ ಬಾಳಿಗೆ.

ಕಬ್ಬಿಣವೂ ಬಾಗುವುದು ಇದ್ದಾಗ ಕಾವು,
ನಿನ್ನ ಅಂಜಿಕೆಯೇ ನಿಜವಾದ ಸಾವು.

ನಿನ್ನನ್ನು ಏಳಿಸುವವರು ಯಾರೂ ಇಲ್ಲ,
ಬೀಳಿಸುವವರೇ ಜಾಸ್ತಿ ಇಲ್ಲಿ ಎಲ್ಲಾ.

ದೃಢ ಮನಸ್ಸಿದ್ದರೆ ಎಲ್ಲವೂ ಸಾಧ್ಯ,
ಚಂಚಲ ಮನಸ್ಸಿಗೆ ಎಲ್ಲವೂ ಅಸಾಧ್ಯ.


- ಹರ್ಷ ಹೆಮ್ಮಾಡಿ.

Tuesday 25 March 2014

ಪ್ರೀತಿ ಕಾವು

ಅಂದುಕೊಂಡಿದ್ದೆ ನೀನೊಂದು ಸುಂದರ ಹೂವು,
ಕಚ್ಚಿದಮೇಲೆ ಗೊತ್ತಾಯ್ತು ನೀ ಹೂವಲ್ಲ ಹಾವು.

ಜೊತೆಯಾಗಿರಬಹುದಿತ್ತು ಬರುವರೆಗೂ ಸಾವು,
ಬೆಲ್ಲದ ಗಲ್ಲದವಳೇ ನಿನ್ನ ಮನಸ್ಯಾಕೆ ಬೇವು.

ಏನು ಮಾಡೋದಕ್ಕಾಗುತ್ತೆ ನಾವು ನೀವು,
ಇರೋದು ಸಹಜ ನಗುವಿನ ಜೊತೆ ನೋವು.

ತುಂಬಾ ಅಪಾಯ ಕಣ್ರೀ ಪ್ರೀತಿ ಕಾವು,
ಆರೋದಿಲ್ಲ ಹೃದಯ ಕೆರೆದು ಆದ್ರೂನು ಕೀವು.


- ಹರ್ಷ ಹೆಮ್ಮಾಡಿ.

ಲಾಲಿ

ನೀನು ಮೊದಲ ಮಳೆ,
ನಾನು ಬೇಸಿಗೆಯ ಇಳೆ.

ನೀ ನನ್ನ ಮೈಸೋಕೆ,
ಒಡಲಲ್ಲೇನೋ ಕೇಕೆ.

ಇದೊಂಥರ ಹೊಸತು,
ಹಲವು ಆಸೆಗಳು ಬೆಸೆತು.

ಬಯಕೆಗೆ ಯಾಕೆ ಬೇಲಿ,
ಹಾಡೋಣ ಪ್ರೀತಿಗೆ ಲಾಲಿ.


- ಹರ್ಷ ಹೆಮ್ಮಾಡಿ.

Sunday 23 March 2014

ವಿಧಿ

ಗುರಿಯಿಲ್ಲದೇ ಹಾಕಬಾರದು ಅಡಿಪಾಯ,
ಅಂತಹ ಯೋಜನೆಗೆ ತಪ್ಪಿದ್ದಲ್ಲ ಅಪಾಯ.

ತಲೆನೋವನ್ನು ತರಬಹುದು ಕಾತುರತೆ,
ಆದರೆ ತಲೆಯನ್ನೇ ತೆಗೆಯಬಹುದು ಆತುರತೆ.

ಎಲ್ಲರ ಬದುಕಿನಲ್ಲೂ ಏಳು ಬೀಳು ಸಹಜ,
ಕಾಲಿಯೇ ಅಲ್ಲವೇ ತುಂಬುವ ಮೊದಲು ಕಣಜ.

ಎಲ್ಲಾದಕ್ಕೂ ಕೂಡಿಬರಬೇಕು ಅವಧಿ,
ಆಗಿಯೇ ಆಗುತ್ತದೆ ಏನಿದೆಯೋ ಆ ವಿಧಿ.


- ಹರ್ಷ ಹೆಮ್ಮಾಡಿ.

Monday 10 February 2014

ಮೋಡಿ

ಅದೇನೋ ಮೋಡಿ ಕಣ್ರೀ ಅವಳ ಕಣ್ಣುಗಳಲ್ಲಿ,
ಅದನ್ನು ನಾನು ನೋಡಿಲ್ಲ ಬೇರೆ ಹೆಣ್ಣುಗಳಲ್ಲಿ.

ಆಕೆಯ ಸನ್ನೆಯೇ ನನಗೊಂದು ಮಹಾಕಾವ್ಯ,
ತರ್ಕಕ್ಕೆ ನಿಲುಕದ ವಿಷಯಗಳಿಗಿಂತ ನವ್ಯ.

ಚೆಲುವೆಯೇ ನಿನ್ನ ಸ್ವರ ಸಂಗೀತ ನಡಿಗೆ ನೃತ್ಯ,
ನಿನ್ನ ಮುಂದೆ ಕೋಗಿಲೆ ನವಿಲೂ ಸೋಲುವುದು ಸತ್ಯ.

ಹುಟ್ಟಿದಂತಿದೆ ನೀನು ಮುಂಜಾವಿನಲ್ಲಿ ಹೂ ಅರಳಲು,
ಯಾಕೋ ಪದಗಳೇ ಸಾಲುತ್ತಿಲ್ಲ ನಿನ್ನ ಹೊಗಳಲು.


- ಹರ್ಷ ಹೆಮ್ಮಾಡಿ.

Monday 3 February 2014

ಹರ್ಷ ಉವಾಚ-೧೨

ಉತ್ತುಂಗದಲ್ಲಿರುವ ಕಾಗೆಯೂ ಕೂಡ ಬಹುತೇಕ ಕಣ್ಣುಗಳಿಗೆ ಬಿಳಿಯಾಗಿ ಕಾಣುತ್ತದೆ.”

- ಹರ್ಷ ಹೆಮ್ಮಾಡಿ.

Sunday 26 January 2014

ನೀ ಕೊಡೆ ನಾ ಬಿಡೆ

ನೀನೆಂದಿಗೂ ಕೊಡೆ ನಿನ್ನ ಮನಸ್ಸನ್ನು,
ನಾನೆಂದಿಗೂ ಬಿಡೆ ನನ್ನ ಕನಸ್ಸನ್ನು.

ಕೊಡುವುದು ಬಿಡುವುದು ಅದು ನಿನ್ನಿಷ್ಟ,
ಕೊಡದಿದ್ದರೆ ನನ್ನಿರುವಿಕೆಯೇ ಬಲು ಕಷ್ಟ.

ವಯಸ್ಸು ಕಣೇ ಗೊತ್ತಾಗದೇ ಜಾರಿದೆ,
ಮನಸ್ಸಲ್ಲೀಗ ಹಲವು ಆಸೆಗಳು ಬೇರೂರಿದೆ.

ನಿನ್ನ ನೆನಪಲ್ಲಿ ನಾನು ನಿಂತ ನೀರಾದೆ,
ಆಗುವೆಯೋ ಇಲ್ಲವೋ ನೀ ನನ್ನ ರಾಧೆ.


- ಹರ್ಷ ಹೆಮ್ಮಾಡಿ.

Sunday 19 January 2014

ಹಂಗು

ರಂಗುರಂಗಿನ ರಂಗವಲ್ಲಿ ಹಂಗಿಲ್ಲದ ಬದುಕಿನಲ್ಲಿ,
ರಂಗಿಲ್ಲದ ಮದರಂಗಿ ಹಂಗಿನಡಿ ಬದುಕಿದಲ್ಲಿ.

ಒಲಿಯುವುದು ಜಯದಮಾಲೆ ಏಕಚಿತ್ತನಿಗೆ,
ಎರಗುವುದು ಬೆಟ್ಟ ತಲೆಮೇಲೆ ಚಿತ್ತಚಂಚಲನಿಗೆ.

ಬರುವುದು ಬಹಳ ವಿರಳ ಅವಕಾಶ ಪದೇಪದೇ,
ಬಿಡದೇ ಬಾಚಿಕೋ ಬಂದಾಗ ತಡಮಾಡದೆ.

ಸ್ವರ್ಗ ನರಕವೆಲ್ಲಾ ಇಲ್ಲೇ ಎಂಬುದು ಸತ್ಯನುಡಿ,
ಕಪಟ ಬಗೆಯದೇ ಎಂದಿಗೂ ನ್ಯಾಯದೆಡೆಗೆ ದುಡಿ.


- ಹರ್ಷ ಹೆಮ್ಮಾಡಿ.

Sunday 12 January 2014

ಮುಗಿದ ಅಧ್ಯಾಯ

ಅವಳ ಮನದಲ್ಲಿ ಮಾಡುವುದು ಮನೆ,
ಮುಟ್ಟಿದಂತೆಯೇ ಸರೀ ವೃತ್ತದ ಕೊನೆ.

ಅವಳ ಧ್ಯಾನದಲ್ಲಾದೆ ಘನಘೋರ ತಪಸ್ವಿ,  
ಮತ್ಯಾರಾಗಿದ್ದರೂ ನಾನಾಗುತ್ತಿದ್ದೆ ಯಶಸ್ವಿ.

ಅದ್ಯಾಕೋ ನಾನಾಗಲಿಲ್ಲ ಅವಳಿಗೆ ಇಷ್ಟ,
ವ್ಯರ್ಥವಾಯ್ತು ಓಲೈಸಲು ನಾ ಪಟ್ಟ ಕಷ್ಟ.

ಹಾಕುತ್ತಿದ್ದೇನೆ ಹೊಸಬದುಕಿಗೆ ಅಡಿಪಾಯ,
ಅವಳೇನಿದ್ದರೂ ಈಗ ಮುಗಿದ ಅಧ್ಯಾಯ.


- ಹರ್ಷ ಹೆಮ್ಮಾಡಿ.

Friday 10 January 2014

ಕಾಣುವ ತವಕ

ನನ್ನ ತಿಜೋರಿಯ ಮೂಲೆ ಸೇರಿದ ನಿನ್ನ ಭಾವಚಿತ್ರಗಳು,
ಇಂದು ನೋಡಿದರೂ ಕೂಡ ಒದ್ದೆಯಾಗುತ್ತವೆ ಕಣ್ಣಾಲೆಗಳು.

ಇಂದಿಗೂ ನನಗೆ ತಿಳಿದಿಲ್ಲ ಒಲವೇ ನಾವು ಬೇರ್ಪಟ್ಟ ಕಾರಣ,
ತಿಳಿದರೆಷ್ಟು ತಿಳಿಯದಿದ್ದರೆಷ್ಟು ಆಗೋಗಿದೆ ಭಾವನೆಗಳ ಹರಣ.

ಬ್ರಹದಾಕಾರದ ಸಮುದ್ರದಲೆಗಳಿಗೆ ಎದೆಯೊಡ್ಡಿ ನಿಲ್ಲಬಲ್ಲೆ,
ಆದರೆ ನಿನ್ನ ನೆನಪಿನ ಅಲೆಗಳಲ್ಲಿ ಕೊಚ್ಚಿಹೋಗುತ್ತಿದ್ದೇನೆ ನಲ್ಲೆ.

ಮತ್ತೊಮ್ಮೆ ನಿನ್ನ ಬೇಟಿಯಾಗುವೇನೋ ಇಲ್ಲವೋ ಗೊತ್ತಿಲ್ಲ,
ಆದರೆ ನಿನ್ನ ಕಾಣುವ ತವಕ ಮಾತ್ರ ಎಂದಿಗೂ ಸಾಯಲ್ಲ.


- ಹರ್ಷ ಹೆಮ್ಮಾಡಿ.

Wednesday 8 January 2014

ದೂರವಿರಿಸಿದೆ

ಯಾಕೋ ನೀನು ಅದನೇ ಗೊಣಗುತ ನನ್ನ ದೂರವಿರಿಸಿದೆ.

ಮನಸ್ಸು ಬೇಡವೆಂದರೂ ನನ್ನ ಕಣ್ಣು ನಿನ್ನೇ ನೋಡುತ್ತಿದೆ,
ಕಣ್ಣಮಾತು ಕೇಳಿ ಮನಸ್ಸೀಗ ಯಾಕೋ ನಿನ್ನೇ ಬೇಡುತ್ತಿದೆ.

ನೀ ಚುಂಬಿಸದೇ ನನ್ನೀ ಅದರವು ಬಾಡಿಹೋಗುತ್ತಿದೆ,
ನೀ ಸ್ಪರ್ಷಿಸದೇ ನನ್ನ ಮೈಯಾಕೋ ಮುದುಡುತ್ತಿದೆ.

ಹೃದಯ ಕೂಡ ತಾಳತಪ್ಪಿದ ಪ್ರೇಮಗೀತೆ ಹಾಡುತ್ತಿದೆ,
ಇತ್ತೀಚಿಗೆ ನನಗೆ ಕ್ಷಣಕ್ಷಣವೂ ನಿನ್ನ ನೆನಪೇ ಕಾಡುತ್ತಿದೆ.


- ಹರ್ಷ ಹೆಮ್ಮಾಡಿ.

Monday 6 January 2014

ಹುಡುಕದಿರು ಕಾರಣ

ಹುಡುಕದಿರು ಕಾರಣ ನನ್ನ ದೂರವಿರಿಸಲು,
ತುದಿಗಾಲಲ್ಲಿ ನಿಂತಿರುವೆ ನಿನ್ನ ಆವರಿಸಲು.

ನನಗೀಗ ನಿದ್ದೆಯಲ್ಲೂ ನಗುವ ಖಯಾಲಿ,
ಮತ್ತೇ ಮತ್ತೇ ನಿನ್ನದೇ ಕನವರಿಕೆಯಲ್ಲಿ.

ನಿನ್ನ ಹೊರತು ನನಗೇನೂ ರುಚಿಸುತ್ತಿಲ್ಲ,
ನೀನ್ಯಾಕೆ ಒಲವೇ ನನ್ನ ಹೀಗೆ ಬಯಸುತ್ತಿಲ್ಲ.

ನಿನ್ನ ಹೃದಯದಲ್ಲಿ ಜಾಗಕೊಡು ಕೊಂಚ,
ನೀನೇ ಕಣೇ ನನಗೆ ತಿಳಿದಿರುವ ಪ್ರಪಂಚ.


- ಹರ್ಷ ಹೆಮ್ಮಾಡಿ.