Saturday 12 July 2014

ಮಾಲಿ

ಅದೆಷ್ಟೋ ಅತ್ತಿದ್ದೇನೆ ನೀನಿಲ್ಲವೆಂದು ಹತ್ತಿರ,
ಅಳುವಿಗೆ ಕಂಡುಕೊಂಡೆ ನನ್ನದೇ ಉತ್ತರ.

ವಾಸ್ತವದ ನೆಡೆಗೆ ನೀ ಒಡ್ದಿರಬಹುದು ತಡೆ,
ಆದರೆ ಕನಸಲ್ಲಿ ನಾನು ನೆಡೆದಿದ್ದೇ ನೆಡೆ.

ನನ್ನವಳನಾಗುವೆ ನೀನು ನಿದ್ದೆ ಆವರಿಸಲು,
ಮುಕ್ತ ನಾನು ಕನಸಲ್ಲಿ ನಿನ್ನ ಆರಾಧಿಸಿಲು.

ಹಾಕುವೆಯಾ ನೀನು ಕನಸಿಗೂ ಬೇಲಿ,
ನಿನಗಲ್ಲದಿದ್ದರೂ ಕನಸಿಗೆ ನಾನು ಮಾಲಿ.

- ಹರ್ಷ ಹೆಮ್ಮಾಡಿ.

Tuesday 8 July 2014

ನೀನಾಗಿ

ಬೀಸು ನನ್ನತ್ತ ಬೀಸುವ ತಂಗಾಳಿ ನೀನಾಗಿ,
ಸುಳಿಬೇಡ ನನ್ನತ್ತ ಸುಂಟರಗಾಳಿ ನೀನಾಗಿ.

ನಡುಗಿಸು ನನ್ನ ಹಿತವಾದ ಚಳಿ ನೀನಾಗಿ,
ಸುಡಬೇಡ ನನ್ನ ಸುಡುವ ಬಿಸಿಲು ನೀನಾಗಿ.

ಸುರಿ ನನ್ಮೇಲೆ ತುಂತುರುಮಳೆ ನೀನಾಗಿ,
ಸುರಿಯದಿರು ನನ್ಮೇಲೆ ಆಮ್ಲಮಳೆ ನೀನಾಗಿ.

ಬಾ ನನ್ನ ಬಾಳಲ್ಲಿ ಬೆಳದಿಂಗಳು ನೀನಾಗಿ,
ಬರದಿರು ಎಂದೆಂದೂ ಕಗ್ಗತ್ತಲು ನೀನಾಗಿ.

- ಹರ್ಷ ಹೆಮ್ಮಾಡಿ.

Sunday 6 July 2014

ನೆನಪುಗಳು

ನಿನ್ನ ಇರುವಿಕೆಯೆಲ್ಲಾ ಇಂದು ಬರೀ ನೆನಪುಗಳು,
ಮರುಕಳಿಸಬಾರದೇಕೆ ಅಂದನಿಸುತ್ತದೆ ಆ ದಿನಗಳು.

ಎಂದೂ ಮರೆಯಲಾಗದ ಕ್ಷಣಗಳವು ನಿನ್ನೊಡನೆ ನಕ್ಕಿದ್ದು,
ನಿನ್ನ ತುಟಿಗಂಟಿದ ಚೋಕೋಲೇಟನ್ನು ನಾನು ನೆಕ್ಕಿದ್ದು.

ಸನಿಹವಿದ್ದರೆ ನೀನು ನನ್ನ ನೋವುಗಳ ಸಾವು,
ಮರೆತಿದ್ದೆ ನನ್ನೇ ಚಿನ್ನ ಜೊತೆಯಾಗಿದ್ದಾಗ ನಾವು.

ಗೊತ್ತಿರಲಿಲ್ಲ ನನಗೆ ಪ್ರೀತಿಗಿರಬೇಕೆಂದು ರೀತಿ ನೀತಿ,
ದೂರಮಾಡುವಷ್ಟು ವಿಪರೀತವಾಗಿತ್ತೇ ನನ್ನ ಪ್ರೀತಿ.

- ಹರ್ಷ ಹೆಮ್ಮಾಡಿ.

Thursday 3 July 2014

ದುಂಬಿ

ತನ್ನಷ್ಟಕ್ಕೆ ತಾನು ಎತ್ತಲೋ ಹೊರಟಿದ್ದ ಆ ದುಂಬಿ,
ಕಂಡಿತೊಂದು ಮಲ್ಲಿಗೆಯನ್ನು ಅದಾಗಷ್ಟೇ ಅರಳಿತ್ತು ಮೈತುಂಬಿ.

ಎಂದೂ ಇರದ ಕಾಂತಿಯಿಂದ ಕೂಡಿತ್ತು ಅಂದು ಆ ಮಲ್ಲಿಗೆ,
ಕಾಂತಿಯ ಭ್ರಾಂತಿಯಿಂದ ದುಂಬಿ ಬಂದು ಕೂತಿತು ಮೆಲ್ಲಗೆ.

ಮಲ್ಲಿಗೆಯ ಸಾಂಗತ್ಯದಲ್ಲಿ ದುಂಬಿ ತನ್ನ ಮೈಮರೆತಿತ್ತು,
ಮಲ್ಲಿಗೆ ಮತ್ತು ದುಂಬಿಯ ಜೀವ ಹೂ ಕಿತ್ತವನ ಕೈಯಲ್ಲಿತ್ತು.

ಅಂತ್ಯ ಹೀಗಿರುತ್ತದೆಂದು ಹೇಗೆ ತಾನೇ ತಿಳಿದಿರಬೇಕು ದುಂಬಿಗಾಗಲಿ,
ಬದುಕುಳಿಯತಿತ್ತೇನೋ ಹೋಗಿದ್ದರೆ ದುಂಬಿ ಮಲ್ಲಿಗೆಯನ್ನಗಲಿ.

- ಹರ್ಷ ಹೆಮ್ಮಾಡಿ.