Wednesday 30 October 2013

ಬಳ್ಳಿ

ಬಳ್ಳಿಯೇ ಓ ಬಳುಕೋ ಬಳ್ಳಿಯೇ,
ನನ್ನ ಮನಸ್ಸು ಕದ್ದ ಕಳ್ಳಿಯೇ.

ಆಹಾ ಬಳ್ಳಿಯಂತ ನಿನ್ನ ಮೈಮಾಟ,
ಇನ್ನು ಕದಲೋದುಂಟೆ ನನ್ನ ಕಣ್ಣೋಟ.

ನಿಜ ಕೇಳೇ ನನ್ನ ಬಂಗಾರ,
ನಿನ್ನ  ನಗುವೇ ನಿಂಗೆ ಸಿಂಗಾರ.

ನೀನೇ ನನ್ನ ಮುದ್ದು ಭಾಮ,
ಕಾಯ್ತಿದ್ದಾನೆ ಈ ನಿನ್ನ ಶ್ಯಾಮ.


- ಹರ್ಷ ಹೆಮ್ಮಾಡಿ.

Tuesday 29 October 2013

ಅನಾಮಿಕಾ


ಅನಾಮಿಕಾ ನಿನ್ನಲ್ಲೇನೋ ಇದೆ,
ನಿನ್ನ ಕಣ್ಣು ನನ್ನೇ ಕಾಡುತ್ತಿದೆ.

ಒಮ್ಮೇ ಬಾರೆ ನನ್ನ ಎದುರು,
ನೀನೇ ಕಣೆ ನನ್ನ ಉಸಿರು.

ಈ ಥರ ಯಾವತ್ತೂ ಆಗಿಲ್ಲ,
ನನ್ನ ಕಾಲು ನೆಲದ್ಮೇಲೆ ನಿಲ್ತಿಲ್ಲ.

ನನ್ನ ಹೃದಯ ಇನ್ನೂ ಖಾಲಿ ನೋಡೆ,
ನೀ ಬಂದು ಆ ಜಾಗ ತುಂಬಿ ಬಿಡೆ.

- ಹರ್ಷ ಹೆಮ್ಮಾಡಿ.

Tuesday 22 October 2013

ಹಣೆಬರಹ

ಇದ್ದರೇನು ತಲೆಮಾರಿಗಾಗುವಷ್ಟು ಶ್ರೀಮಂತಿಕೆ,
ನಿನಗೆ ಇರದಿದ್ದ ಮೇಲೆ ಸ್ವಲ್ಪವೂ ಸ್ವಂತಿಕೆ.

ಆಗುವುದಿಲ್ಲಿ ಪ್ರತಿಹುಟ್ಟು ಏನಾದರೂ ಸಾಧಿಸಲೆಂದು,
ಎಷ್ಟು ಸರಿ ಏನನ್ನೂ ಸಾಧಿಸದೆ ಸಾಯುವುದು.

ಒಳ್ಳೆಯವನಿಗೆ ಗತಿಸಿದಮೇಲೂ ಸಿಗುವುದು ಆರಾಧನೆ,
ಕೆಟ್ಟವನಾದರೆ ಮಾಡರೂ ಕೂಡ ಸಮಾರಾಧನೆ.

ಕೂಗಾಡು ಬಡಿದಾಡು ಮಾಡಿದ್ದೇ ಮಾಡು ಪುನಹ,
ಕೊನೆಗಾಗುವುದು ಏನಿದೆಯೋ ನಿನ್ನ ಹಣೆಬರಹ.


- ಹರ್ಷ ಹೆಮ್ಮಾಡಿ.

ಅರ್ಧಾಂಗಿ

ಒಳ್ಳೆಯವಳು ನನ್ನ ಅರ್ಧಾಂಗಿ,
ನಾನೇ ಸ್ವಲ್ಪ ಎಡಬಿಡಂಗಿ.

ನಮ್ಮಿಬ್ಬರ ಪ್ರೀತಿ ಅದು ಅಸಲಿ,
ಆಗುವುದೂ ಜಗಳ ಕೇವಲ ನಕಲಿ.

ನನ್ನ ಉಸಿರು ಕಣೇ ನೀನು,
ನೀನಿಲ್ಲದೆ ಬದುಕಲ್ಲ ನಾನು.

ನೀನಾಗಬೇಕು ನನ್ನ ಬಾಳಿಗೆ ಒಡತಿ,
ನಾ ಜನ್ಮವೆತ್ತಿದರೂ ಎಷ್ಟೇ ಸರತಿ.


- ಹರ್ಷ ಹೆಮ್ಮಾಡಿ.

Sunday 20 October 2013

ಉಪ್ಪು

ಯಾಕೆ ನಮಗಿಲ್ಲಿ ಹುಟ್ಟುವುದು ಉಪ್ಪು ಖಾರದ ಕನಸು,
ಬಾಳು ಮತ್ಯಾಕಿಷ್ಟೊಂದು ಸಪ್ಪೆ ಅದಾಗದಿದ್ದಾಗ ನನಸು.

ಈ ಬಾಳೆಂಬ ಅಡುಗೆಯನ್ನು ನಾವು ಮಾಡ್ತಿರೋದೇ ತಪ್ಪೇ,
ಎಷ್ಟು ಜಾಗ್ರತೆವಹಿಸಿದರೂ ಎಲ್ಲೋ ಒಂದ್ಕಡೆ ಉಪ್ಪುಸಪ್ಪೆ.

ಯಾವ ಒಗ್ಗರಣೆ ಹಾಕಿ ಎಷ್ಟು ಘಮಘಮಿಸಿದರೇನು,
ಉಪ್ಪೇ ಸರಿಯಿಲ್ಲವೆಂದಮೇಲೆ ಆ ಅಡುಗೆಗರ್ಥವೇನು.

ಯಾರಿಗೆ ಬೇಕು ಉಪ್ಪೇ ಇಲ್ಲದ ಮ್ರಷ್ಟಾನ್ನ,
ಸಾಕಲ್ಲವೇ ಉಪ್ಪು ಖಾರ ಸರಿಯಿರುವ ಚಿತ್ರಾನ್ನ.


- ಹರ್ಷ ಹೆಮ್ಮಾಡಿ.

Tuesday 15 October 2013

ಪ್ರೀತ್ಸೋದು ತಪ್ಪಾ?

ಕುಂತಲ್ಲೂ ನಿಂತಲ್ಲೂ ನಿನ್ನದೇ ಕನವರಿಕೆ,
ಬೆಚ್ಚಿಬೀಳುತ್ತೇನೆ ಆದಾಗ ನೀನಿಲ್ಲವೆಂಬ ಮನವರಿಕೆ.

ಅಂದೆಲ್ಲಾ ನಿನ್ನ ಹೊಗಳಿಕೆಯಿಂದ ನಾನಾಗಿದ್ದೆ ಪ್ರಭಾವಿತ,
ಇಂದು ನೀನೇ ಇಲ್ಲ ಯಾಕಾಯ್ತು ಈ ಅನಾಹುತ.

ಸಾಕಾಗಿದೆ ಸತ್ತ ಸಂಖ್ಯೆಗೆ ರಿಂಗಣಿಸಿ,
ಎಲ್ಲಿ ಮರೆಯಾದೆ ನೀ ಪ್ರೀತಿ ಕಡೆಗಣಿಸಿ.

ಪ್ರೀತ್ಸೋದು ತಪ್ಪಾ ಇಲ್ಲಿ ಬರೀ ನೋವೇನಾ,
ಇಲ್ಲಾ ಕಳೆದುಕೊಂಡಿದ್ದು ನಿನ್ನ ಅರ್ಥೈಸಿಕೊಳ್ಳದೇನಾ.


- ಹರ್ಷ ಹೆಮ್ಮಾಡಿ.

ಸುಮ

ನಿನ್ನ ಘಮದಿಂದ ನನ್ನ ಗಮನ ಸೆಳೆದ ಸುಮ,
ನೀನಿಂದಿಲ್ಲ ಎಲ್ಲಿ ಹುಡುಕಲಿ ನಿನಗೆ ಸರಿಸಮ.

ನನ್ನೆದೆಯಲ್ಲಿ ಅರಳಿದಷ್ಟೇ ಬೇಗ ನೀ ಒಣಗಿ ಹೋದೆ.
ಆದರೂ ಆ ಘಮ ನನ್ನ ಮನಸ್ಸಿನಲ್ಲಿ ಹಾಗೇ ಉಳಿದಿದೆ,

ಕೆಲವೊಮ್ಮೆ ಆ ಘಮ ಮನಸ್ಸಿಗೆ ಹಿತ ತಂದರೆ.
ಇನ್ನೂ ಕೆಲವೊಮ್ಮೆ ತಲೆನೋಯುವುದು ನನಗದು ತೊಂದರೆ.

ಸುಮ ನೀನಿಲ್ಲದ ಮೇಲೆ ಈ ಘಮ ನನಗ್ಯಾಕೆ.
ನೆನಪಿನಿಂದ ಹೊರಹೋಗಿ ಬಿಡು ನೆಮ್ಮದಿಯಿಂದ ಬದುಕೋಕೆ,


- ಹರ್ಷ ಹೆಮ್ಮಾಡಿ.

ಒಂದ್ಸಲ ಮಾತಾಡಿ

ಒಂದ್ಸಲ ಮಾತಾಡಿ ತುಂಬಾ ಬೇಜಾರಾಗ್ತಿದೆ,
ಬಾಯ್ತುಂಬಾ ಬಯ್ದ್ಬಿಡಿ ನೋವು ಕಡಿಮೆ ಆಗ್ತದೆ.

ನಿಮ್ಮನ್ನ ತಬ್ಕೊಂಡು ಅಳಬೇಕು ಅನಿಸ್ತಿದೆ,
ಕಣ್ಣು ಮುಚ್ಚಿದ್ರೆ ನಿಮ್ಮ ಮುಖವೇ ಕಾಣಿಸ್ತಿದೆ.

ನಿಮ್ಮನೆ ಎದುರ್ಗಡೆ ಪಂಚರ್ ಆಗ್ಲಿ ನನ್ನ ಗಾಡಿ,
ಬಾಲ್ಕನಿಗೆ ಬನ್ನಿ ಖುಷಿಪಡ್ತೀನಿ ನಿಮ್ಮ ನೋಡಿ.

ಗಂಟಲು ನೋವಾಗ್ತಾ ಇದೆ ಹಾಡಿದ್ದೇ ಹಾಡಿ,
ಏನಾದ್ರೂ ಅಂದ್ಕೊಳ್ಳಿ ಒಂದ್ಸಲ ಮಾತಾಡಿ.


- ಹರ್ಷ ಹೆಮ್ಮಾಡಿ.

ನಾನು ನೀನು

ಒಮ್ಮೆ ಎದುರುಗೊಳ್ಳುವಾಸೆ ನಿನ್ನ ನಾನು,
ಬಿಡುವುಮಾಡಿಕೊಂಡು ಸಿಗುತ್ತೀಯಾ ನೀನು.

ಕಣ್ತುಂಬಾ ತುಂಬಿಕೊಳ್ಳಬೇಕು ನಿನ್ನ ನಾನು,
ನನಗೋಸ್ಕರ ಮನದುಂಬಿ ನಗುತ್ತೀಯಾ ನೀನು.

ಕಿವಿಗೊಟ್ಟು ಕೇಳಬೇಕು ನಿನ್ನ ನಾನು,
ನನ್ನ ಹೆಸರನ್ನು ಬಾಯ್ತುಂಬಾ ಕರೆಯುತ್ತೀಯಾ ನೀನು.

ಬಿಗಿದಪ್ಪಿ ಮುದ್ದಾಡಬೇಕು ನಿನ್ನ ನಾನು,
ನನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾಗುವೆಯಾ ನೀನು.


- ಹರ್ಷ ಹೆಮ್ಮಾಡಿ.

ಮರೆತಂತೆ ನಟಿಸು

ಮರೆತಂತೆ ನಟಿಸು ಓ ಚಿನ್ನ,
ಹಾಗಂತ ಮರೆತೇ ಬಿಡಬೇಡ ನನ್ನ.

ಬರಬರುತ್ತಾ ತುಂಬಾ ಹಚ್ಚಿಕೊಳ್ಳುತ್ತಿದ್ದೇನೆ,
ನಿನ್ನಲ್ಲಿ ನನ್ನೇ ನಾ ಕಳೆದುಕೊಳ್ಳುತ್ತಿದ್ದೇನೆ.

ಗೊತ್ತಿಲ್ಲ ನಗಬೇಕೋ ನೀ ಇರುವೆಯೆಂದು.
ಇಲ್ಲ ಅಳಬೇಕೋ ನೀ ನನ್ನವಳಾಗುವುದಿಲ್ಲವೆಂದು,

ಪ್ರೀತಿಸು ಅದರೂ ನನ್ನ ದೂರವಿರಿಸು.
ನನಗೆ ತಿಳಿಯದಂತೆ ನನ್ನ ಪ್ರೀತಿಸು.


- ಹರ್ಷ ಹೆಮ್ಮಾಡಿ.

ಅವನು ಅವಳು

ಅವನು ಅವಳೊಳಗೆ ಅವಳು ಅವನೊಳಗೆ,
ಪ್ರೀತಿ ಮೂಡಿತ್ತು ಅವರಿಬ್ಬರೊಳಗೆ. 

ಬಯಸದೇ ಒಬ್ಬರಿಗೊಬ್ಬರು ಪರಿಚಯವಾದರು,
ಬಯಸಿ ಬಯಸಿ ಒಬ್ಬರನ್ನೊಬ್ಬರು ಪ್ರೀತಿಸಿದರು.

ಎಂದೂ ಕಾಣದ ಖುಷಿ ಅವರಿಬ್ಬರೊಳಗೆ ಮೂಡಿತ್ತು,
ನಲಿವೆಂಬ ಬೂದಿಯೊಳಗೆ ನೋವೆಂಬ ಕೆಂಡವಿತ್ತು.

ಹರೆಯದಲ್ಲಿ ಕಾಣುತ್ತಿದ್ದ ಕನಸು ಪ್ರೀತಿ ಮೂಡಿಸಿತು,
ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಮನಸು ಪ್ರೀತಿ ಮುರಿಯಿತು.


- ಹರ್ಷ ಹೆಮ್ಮಾಡಿ.

Monday 7 October 2013

ಹರ್ಷ ಉವಾಚ - ೯

ಪ್ರಯತ್ನ ಫಲಿಸಲು ಅದೃಷ್ಟ ಎಷ್ಟು ಅಗತ್ಯವೋ, ಅದೃಷ್ಟ ಖುಲಾಯಿಸಲೂ ಕೂಡ ಪ್ರಯತ್ನ ಅಷ್ಟೇ ಅಗತ್ಯ.

- ಹರ್ಷ ಹೆಮ್ಮಾಡಿ.

ಪರಿಪೂರ್ಣ

ಯಾರು ಪರಿಪೂರ್ಣ ಹೇಳಿ ಈ ಜಗದೊಳಗೆ,
ಮೇಲೆ ತಳುಕು ಬಳುಕು ಬರೀ ಹುಳುಕು ಒಳಗೊಳಗೆ.

ಮೂರುದಿನದ ಬಾಳಿಗೆ ಇಲ್ಲಸಲ್ಲದ ತಕರಾರು,
ಪ್ರತಿಯೊಂದು ಹೆಜ್ಜೆಗೂ ನೂರಾರು ಕರಾರು.

ಯಾಕೆ ಮರುಗುವುದು ಮಾಡಿ ನಿನ್ನೆ ನಾಳೆಯ ಚಿಂತೆ,
ಇಂದು ಖುಷಿಯಾಗಿರು ನಿನ್ನೆ ನಾಳೆ ಕೇವಲ ಅಂತೆ ಕಂತೆ.

ಯಾರನ್ನೋ ಮೆಚ್ಚಿಸಲು ನಾವ್ಯಾಕೆ ಒದ್ದಾಡಬೇಕು,
ಬದುಕಲು ನಮ್ಮ ಮೇಲೆ ನಮಗೆ ಗೌರವವಿದ್ದರೆ ಸಾಕು.


- ಹರ್ಷ ಹೆಮ್ಮಾಡಿ.

Friday 4 October 2013

ಒರಟು

ನಾ ಬೇಲಿಮೇಲಿನ ಮುಳ್ಳು ತುಂಬಾ ಒರಟು,
ನೀ ಮೃದುವಾದ ಎಲೆ ದೂರನಿಂತೇ ಹರಟು.

ನಾನೇ ನಿನಗೆ ನೀನೇ ನನಗೆ ತಾಗಿದರೂ,
ತೊಂದರೆ ನಿನಗೆ ಎಷ್ಟು ಜಾಗ್ರತೆವಹಿಸಿದರು.

ಇದಮರೆತು ಹತ್ತಿರಬಂದರೆ ಜೋಕೆ,
ಆಮೇಲೆ ನೀ ನನ್ನ ಬಯ್ಯುವುದು ಬೇಕೆ.

ಆದರೂ ನಿನಗಿಷ್ಟವಿದ್ದರೆ ನಾ ಬಯಸುವೆ ನಿನ್ನ ಸ್ಪರ್ಷ,
ಸ್ಪರ್ಷವಾದಮೇಲೂ ನಿನ್ನಲ್ಲಿರುವುದಾದರೆ ಮಾತ್ರ ಹರ್ಷ.


- ಹರ್ಷ ಹೆಮ್ಮಾಡಿ.  

Thursday 3 October 2013

ಚಂಚಲೆ

ಚಂಚಲೆ ಇವಳು ಏನೇನೋ ಬಯಸುತ್ತಾಳೆ,
ಬಾಯಿಬಿಡದೇ ಪರೋಕ್ಷವಾಗಿ ನೋಯಿಸುತ್ತಾಳೆ.

ನಿನ್ನ ಬಾಳಲ್ಲಿ ಖುಷಿಯನ್ನು ಹೊತ್ತುತರುತ್ತೇನಂದವಳು,
ಕೇವಲ ನಾ ಬರೆವ ಹಾಳೆಗೂ ಲೇಖನಿ ಮಸಿಗೂ ಸೀಮಿತವಾದಳು. 

ತುಸುಗಳಿಗೆ ಬೆಟ್ಟದಷ್ಟು ಪ್ರೀತಿಸುತ್ತಿದ್ದಳು,
ಅದಬಿಟ್ಟರೇ ಬೆಟ್ಟವೇ ತಲೆಮೇಲೆ ಬಿದ್ದಂತಾಡುತ್ತಿದ್ದಳು.

ಪ್ರೀತಿಮಾಡಲು ತಾಳ್ಮೆ ತುಂಬಾ ಅಗತ್ಯ,
ನನಗದು ಸ್ವಲ್ಪ ಕಡಿಮೆ ಅರ್ಥವಾಯಿತೀಗ ಆ ಸತ್ಯ.


- ಹರ್ಷ ಹೆಮ್ಮಾಡಿ.

Tuesday 1 October 2013

ಬಿದ್ದೆ

ನನ್ನಷ್ಟಕ್ಕೆ ನಾ ಹೇಗೋ ಇದ್ದೆ,
ನೀ ಬಂದು ಕದ್ದೆ ನನ್ನ ನಿದ್ದೆ.

ನಾ ಎದ್ದೆ ನಿನ್ನ ಹಿಂದೆ ಬಿದ್ದೆ,
ಮುದ್ದು ಮಾಡಿ ನೀ ನನ್ನ ಗೆದ್ದೆ.

ಅಂದಿದ್ದೇ ನೀ ನನ್ನ ಬಾಳಿಗೆ ಬದ್ಧೆ,
ಆದರಿಂದೇಕೋ ಕೇಳಿಸ್ತಿಲ್ಲ ನಿನ್ನ ಸದ್ದೆ.

ಏನಾಯ್ತೀಗ ಯಾಕೆ ಹೀಗೆ ಒದ್ದೆ,
ಎಷ್ಟು ಒರೆಸಿದರೂ ಕಣ್ಣನಿಸುತ್ತಿದೆ ಒದ್ದೆ.


- ಹರ್ಷ ಹೆಮ್ಮಾಡಿ.

ಪದಾಧಿಕಾರಿ

ನಿನ್ನ ಬಿಗಿಯಪ್ಪುಗೆಯಲ್ಲಿ ಜಗವ ಮರೆಯುವಾಸೆ,
ತಡಮಾಡದೆ ಬಂದೆನ್ನ ಅಪ್ಪು ನನ್ನಮ್ಮನ ಸೊಸೆ.

ಪ್ರತೀಕ್ಷಣ ಇರಬೇಕು ನೀ ನನ್ನ ಸನಿಹ,
ಈ ಬದುಕೇ ಅಪೂರ್ಣ ಕಣೆ ನಿನ್ನ ವಿನಹ.

ನಿನ್ನ ತೊಡೆಮೇಲೆ ತಲೆಯಿಟ್ಟು ಮಲಗಬೇಕು,
ಬಿಡುವಿದ್ದರೆ ಅರೆಗಳಿಗೆ ನನ್ನ ತಲೆಸವರಿದರೆ ಸಾಕು.

ನನ್ನ ಬಹುತೇಕ ಕವನಗಳಿಗೆ ಪದಗಳೇ ನೀನು,
ನಿನ್ನ ಬಾಳಿಗೆ ಪದಾಧಿಕಾರಿಯಾಗಲೇ ನಾನು.


- ಹರ್ಷ ಹೆಮ್ಮಾಡಿ.