Sunday 26 January 2014

ನೀ ಕೊಡೆ ನಾ ಬಿಡೆ

ನೀನೆಂದಿಗೂ ಕೊಡೆ ನಿನ್ನ ಮನಸ್ಸನ್ನು,
ನಾನೆಂದಿಗೂ ಬಿಡೆ ನನ್ನ ಕನಸ್ಸನ್ನು.

ಕೊಡುವುದು ಬಿಡುವುದು ಅದು ನಿನ್ನಿಷ್ಟ,
ಕೊಡದಿದ್ದರೆ ನನ್ನಿರುವಿಕೆಯೇ ಬಲು ಕಷ್ಟ.

ವಯಸ್ಸು ಕಣೇ ಗೊತ್ತಾಗದೇ ಜಾರಿದೆ,
ಮನಸ್ಸಲ್ಲೀಗ ಹಲವು ಆಸೆಗಳು ಬೇರೂರಿದೆ.

ನಿನ್ನ ನೆನಪಲ್ಲಿ ನಾನು ನಿಂತ ನೀರಾದೆ,
ಆಗುವೆಯೋ ಇಲ್ಲವೋ ನೀ ನನ್ನ ರಾಧೆ.


- ಹರ್ಷ ಹೆಮ್ಮಾಡಿ.

Sunday 19 January 2014

ಹಂಗು

ರಂಗುರಂಗಿನ ರಂಗವಲ್ಲಿ ಹಂಗಿಲ್ಲದ ಬದುಕಿನಲ್ಲಿ,
ರಂಗಿಲ್ಲದ ಮದರಂಗಿ ಹಂಗಿನಡಿ ಬದುಕಿದಲ್ಲಿ.

ಒಲಿಯುವುದು ಜಯದಮಾಲೆ ಏಕಚಿತ್ತನಿಗೆ,
ಎರಗುವುದು ಬೆಟ್ಟ ತಲೆಮೇಲೆ ಚಿತ್ತಚಂಚಲನಿಗೆ.

ಬರುವುದು ಬಹಳ ವಿರಳ ಅವಕಾಶ ಪದೇಪದೇ,
ಬಿಡದೇ ಬಾಚಿಕೋ ಬಂದಾಗ ತಡಮಾಡದೆ.

ಸ್ವರ್ಗ ನರಕವೆಲ್ಲಾ ಇಲ್ಲೇ ಎಂಬುದು ಸತ್ಯನುಡಿ,
ಕಪಟ ಬಗೆಯದೇ ಎಂದಿಗೂ ನ್ಯಾಯದೆಡೆಗೆ ದುಡಿ.


- ಹರ್ಷ ಹೆಮ್ಮಾಡಿ.

Sunday 12 January 2014

ಮುಗಿದ ಅಧ್ಯಾಯ

ಅವಳ ಮನದಲ್ಲಿ ಮಾಡುವುದು ಮನೆ,
ಮುಟ್ಟಿದಂತೆಯೇ ಸರೀ ವೃತ್ತದ ಕೊನೆ.

ಅವಳ ಧ್ಯಾನದಲ್ಲಾದೆ ಘನಘೋರ ತಪಸ್ವಿ,  
ಮತ್ಯಾರಾಗಿದ್ದರೂ ನಾನಾಗುತ್ತಿದ್ದೆ ಯಶಸ್ವಿ.

ಅದ್ಯಾಕೋ ನಾನಾಗಲಿಲ್ಲ ಅವಳಿಗೆ ಇಷ್ಟ,
ವ್ಯರ್ಥವಾಯ್ತು ಓಲೈಸಲು ನಾ ಪಟ್ಟ ಕಷ್ಟ.

ಹಾಕುತ್ತಿದ್ದೇನೆ ಹೊಸಬದುಕಿಗೆ ಅಡಿಪಾಯ,
ಅವಳೇನಿದ್ದರೂ ಈಗ ಮುಗಿದ ಅಧ್ಯಾಯ.


- ಹರ್ಷ ಹೆಮ್ಮಾಡಿ.

Friday 10 January 2014

ಕಾಣುವ ತವಕ

ನನ್ನ ತಿಜೋರಿಯ ಮೂಲೆ ಸೇರಿದ ನಿನ್ನ ಭಾವಚಿತ್ರಗಳು,
ಇಂದು ನೋಡಿದರೂ ಕೂಡ ಒದ್ದೆಯಾಗುತ್ತವೆ ಕಣ್ಣಾಲೆಗಳು.

ಇಂದಿಗೂ ನನಗೆ ತಿಳಿದಿಲ್ಲ ಒಲವೇ ನಾವು ಬೇರ್ಪಟ್ಟ ಕಾರಣ,
ತಿಳಿದರೆಷ್ಟು ತಿಳಿಯದಿದ್ದರೆಷ್ಟು ಆಗೋಗಿದೆ ಭಾವನೆಗಳ ಹರಣ.

ಬ್ರಹದಾಕಾರದ ಸಮುದ್ರದಲೆಗಳಿಗೆ ಎದೆಯೊಡ್ಡಿ ನಿಲ್ಲಬಲ್ಲೆ,
ಆದರೆ ನಿನ್ನ ನೆನಪಿನ ಅಲೆಗಳಲ್ಲಿ ಕೊಚ್ಚಿಹೋಗುತ್ತಿದ್ದೇನೆ ನಲ್ಲೆ.

ಮತ್ತೊಮ್ಮೆ ನಿನ್ನ ಬೇಟಿಯಾಗುವೇನೋ ಇಲ್ಲವೋ ಗೊತ್ತಿಲ್ಲ,
ಆದರೆ ನಿನ್ನ ಕಾಣುವ ತವಕ ಮಾತ್ರ ಎಂದಿಗೂ ಸಾಯಲ್ಲ.


- ಹರ್ಷ ಹೆಮ್ಮಾಡಿ.

Wednesday 8 January 2014

ದೂರವಿರಿಸಿದೆ

ಯಾಕೋ ನೀನು ಅದನೇ ಗೊಣಗುತ ನನ್ನ ದೂರವಿರಿಸಿದೆ.

ಮನಸ್ಸು ಬೇಡವೆಂದರೂ ನನ್ನ ಕಣ್ಣು ನಿನ್ನೇ ನೋಡುತ್ತಿದೆ,
ಕಣ್ಣಮಾತು ಕೇಳಿ ಮನಸ್ಸೀಗ ಯಾಕೋ ನಿನ್ನೇ ಬೇಡುತ್ತಿದೆ.

ನೀ ಚುಂಬಿಸದೇ ನನ್ನೀ ಅದರವು ಬಾಡಿಹೋಗುತ್ತಿದೆ,
ನೀ ಸ್ಪರ್ಷಿಸದೇ ನನ್ನ ಮೈಯಾಕೋ ಮುದುಡುತ್ತಿದೆ.

ಹೃದಯ ಕೂಡ ತಾಳತಪ್ಪಿದ ಪ್ರೇಮಗೀತೆ ಹಾಡುತ್ತಿದೆ,
ಇತ್ತೀಚಿಗೆ ನನಗೆ ಕ್ಷಣಕ್ಷಣವೂ ನಿನ್ನ ನೆನಪೇ ಕಾಡುತ್ತಿದೆ.


- ಹರ್ಷ ಹೆಮ್ಮಾಡಿ.

Monday 6 January 2014

ಹುಡುಕದಿರು ಕಾರಣ

ಹುಡುಕದಿರು ಕಾರಣ ನನ್ನ ದೂರವಿರಿಸಲು,
ತುದಿಗಾಲಲ್ಲಿ ನಿಂತಿರುವೆ ನಿನ್ನ ಆವರಿಸಲು.

ನನಗೀಗ ನಿದ್ದೆಯಲ್ಲೂ ನಗುವ ಖಯಾಲಿ,
ಮತ್ತೇ ಮತ್ತೇ ನಿನ್ನದೇ ಕನವರಿಕೆಯಲ್ಲಿ.

ನಿನ್ನ ಹೊರತು ನನಗೇನೂ ರುಚಿಸುತ್ತಿಲ್ಲ,
ನೀನ್ಯಾಕೆ ಒಲವೇ ನನ್ನ ಹೀಗೆ ಬಯಸುತ್ತಿಲ್ಲ.

ನಿನ್ನ ಹೃದಯದಲ್ಲಿ ಜಾಗಕೊಡು ಕೊಂಚ,
ನೀನೇ ಕಣೇ ನನಗೆ ತಿಳಿದಿರುವ ಪ್ರಪಂಚ.


- ಹರ್ಷ ಹೆಮ್ಮಾಡಿ.