Saturday 31 August 2013

ನನ್ನವಳು

ಯಾಕೋ ಗೊತ್ತಿಲ್ಲ ನಂಗೇನು ಗೊತ್ತಿಲ್ಲ ಅಂದ್ರೆ ಇಷ್ಟ ನನ್ನವಳಿಗೆ,
ಎಲ್ಲಾ ಗೊತ್ತಿದ್ರೂನು ಸುಮ್ಮನಿರಬೇಕಾಯ್ತು  ಆ ಘಳಿಗೆ.

ಹೆಣ್ಮಕ್ಕಳೆ ಹೀಗೆ ಅವರಿಷ್ಟಾನೆ ಬೇರೆ ಥರಾ ಸ್ವಾಮಿ,
ಆಗೆಲ್ಲಾ ಗಂಡ್ಮಕ್ಕಳಿಗನಿಸುವುದು ಹೆಣ್ಮಕ್ಕಳಿಗೆ ಬುದ್ಧಿ ಸ್ವಲ್ಪ ಕಮ್ಮಿ.

ನಾ ಹೇಳದೇನೆ ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದಳು ನನ್ನ ನಲ್ಲೆ.
ಆಕೆ ತುಂಬಾ ಒಳ್ಳೆಯವಳು ನನ್ನಾಸೆಗೆ ಎಂದೂ ಅಂದವಳಲ್ಲ ನಾವಲ್ಲೆ.

ಯಾವುದೇ ವಿಷಯವಾಗಲಿ ಅವಳಲ್ಲಿ ನಿನ್ನಷ್ಟು ನನಗೆ ತಿಳಿದಿಲ್ಲವೆಂದರೆ ತುಂಬಾ ಖುಷಿ,
ಎಲ್ಲಾ ತಿಳಿದವನಂತೆ ನಾ ಆರ್ಭಟಿಸಿದರೆ ಸ್ವಲ್ಪ ಬಿಸಿಯಾಗುತ್ತಿದ್ದಳು ನನ್ನ ಶೋಡಷಿ.


- ಹರ್ಷ ಹೆಮ್ಮಾಡಿ.

Thursday 29 August 2013

ಮದುವೆ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಎರಡು ಗಂಡು ಹೆಣ್ಣು ಆದ್ಮೇಲೆ ಮದುವೆ,
ಇದೊಂದು ಬಿಡಿಸಲಾಗದ ಅನುಬಂಧ ಮುಂದೆ ಅವರಾದರೂ ವಿಧುರ ವಿಧವೆ.

ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವುದು ಹಿಂದಿನವರ ನುಡಿ,
ಆದರೆ ಆ ಜಗಳವನ್ನು ವಿಚ್ಚೆದನೆಯಲ್ಲೇ ಮುಗಿಸುವುದು ಈಗಿರುವ ರೂಢಿ.

ಪಾಶ್ಚಾತ್ಯ ಸಂಸ್ಕೃತಿಯನ್ನು ದೇವರಂತೆ ಪೂಜಿಸುವವರಿಗೆ ಏನು ಗೊತ್ತು,
ನಮ್ಮ ಸಂಸ್ಕೃತಿಯ ಅರ್ಥ ಮತ್ತು ಅದರ ಶ್ರೀಮಂತಿಕೆಯ ಗತ್ತು.

ದಂಪತಿಗಳೇ ಏನೇ ಸಮಸ್ಯೆಯಿದ್ದರೂ ಅಹಂ ಬಿಟ್ಟು ಕೂತು ಮಾತನಾಡಿ,
ಸತಿಪತಿ ಸಂಬಂಧ ಪೂರ್ವಜನ್ಮದ್ದು ಎಂಬ ಕಲ್ಪನೆಯನ್ನು ಹಾಳುಮಾಡಬೇಡಿ.


- ಹರ್ಷ ಹೆಮ್ಮಾಡಿ.

ಆಸೆ

ತಾವರೆಯೇ ನೀನೆಷ್ಟು ಚೆಂದ ಇರುವುದು ಕೆಸರಿನಲ್ಲಾದರು,
ಗುಲಾಬಿಯೇ ನೀನೆಷ್ಟು ಮೃದು ಮೈತುಂಬಾ ಮುಳ್ಳಿದ್ದರು.

ಕೋಗಿಲೆಯೇ ನಿನ್ನ ಕಂಠಕ್ಕೆ ಸರಿಸಾಟಿಯಾರು ಬಣ್ಣ ಕಪ್ಪಾದರು,
ನವಿಲೇ ನೀನ್ಹೇಗೆ ಇಷ್ಟು ಚೆಂದ ನರ್ತಿಸುವೆ ಗುರುವಿಲ್ಲದಿದ್ದರು.

ಸೂರ್ಯದೇವ ದಿನವೂ ಬರುವೆಯಲ್ಲ ಬೆಳಗಲು ಬೇಜಾರಾಗುವುದಿಲ್ಲವೇ,
ತಂಗಾಳಿಯೇ ಪ್ರತಿಕ್ಷಣವೂ ಬೀಸುವೆಯಲ್ಲ ದಣಿವಾಗುವುದಿಲ್ಲವೇ.

ಅಭಿನಂದನೆ ಗೋಮಾತೆಗೆ ನಿನ್ನ ಮಗು ಕುಡಿಯುವ ಹಾಲನ್ನು ನಮಗೆ ಕೊಡುತ್ತಿರುವುದಕ್ಕೆ,
ವಂದನೆ ಭೂತಾಯಿಗೆ ನಾವೆಷ್ಟೇ ದಣಿಸಿದರು ನಮ್ಮನ್ನು ಪಾಲಿಸುತ್ತಿರುವುದಕ್ಕೆ.

ನನಗೂ ನಿಮ್ಮಂತೆ ಅಸಾಧರಣವಾಗಿಸುವಾಸೆ ನನ್ನ ಕರ್ಮವನ್ನು,
ದಯಮಾಡಿ ತಿಳಿಸುವಿರಾ ನಿಮ್ಮೊಳಗಿನ ಮರ್ಮವನ್ನು.



- ಹರ್ಷ ಹೆಮ್ಮಾಡಿ.

ರೂಪಾಯಿ ಮೌಲ್ಯ

ಮನದ ಮುಗಿಲಾಚೆಗೆ ಎಂದೂ ಕಾಣದ ಸ್ವಪ್ನ,
ಗಾಢ ನಿದ್ದೆಯಲ್ಲೂ ಬೆಚ್ಚಿಬಿದ್ದೆ ಕಂಡು ಆ ದುಸ್ವಪ್ನ.

ಕ್ಷಣಕ್ಷಣಕ್ಕೂ ಡಾಲರ್ ಎದುರು ಕುಸಿಯುತ್ತಿತ್ತು ರೂಪಾಯಿ ಮೌಲ್ಯ,
ಏರಿಕೆಗೆ ಭಾರತೀಯರೆಲ್ಲರೂ ಕಾಯುತ್ತಿದ್ದರು ರಾಮನಿಗೆ ಕಾದಂತೆ ಅಹಲ್ಯಾ. 

ಕಾರಣಕರ್ತರು ಅಟ್ಟಹಾಸದಿಂದ ನಗುತ್ತಲೇ ಇದ್ದರು,
ಕಾರಣ ತಿಳಿಯದ ಜನಸಾಮಾನ್ಯರು ಹಸಿವೆಯಿಂದ ಬಿದ್ದರು. 

ನಾ ಸೂತ್ರ ಕಂಡುಹಿಡಿದಂತೆ ಮೌಲ್ಯ ಏರಿಸಲು ಕಾಸಿಗೆ,
ಸೂತ್ರ ಮಂಡಿಸುವುದರೊಳಗೆ ನೆಲಕ್ಕುರುಳಿಸಿ ಎಚ್ಚರಿಸಿತು ನಾ ಮಲಗಿದ್ದ ಹಾಸಿಗೆ.



- ಹರ್ಷ ಹೆಮ್ಮಾಡಿ.

Monday 26 August 2013

ರಾಜಕೀಯ

ಸುದ್ದಿಯಾಗುವುದು ನಿಜ, ಮಂತ್ರಿಯಾದಮೇಲೆ ಮಾಡಿದರೂ ಮಾಡದಿದ್ದರೂ ಆತ ಅವನ ಕಾಯಕ.
ಮೊನ್ನೆಯಿಂದೀಚೆಗೆ ಆ ಪಕ್ಷದ ಮಂತ್ರಿಯ ಕಾಲೆಳೆಯಲು ಹೋಗಿ, ಈ ಪಕ್ಷದವರೇ ಪರೋಕ್ಷವಾಗಿ ಮಾಡುತ್ತಿರುವುದು ಸುಳ್ಳಲ್ಲ ಕೇಂದ್ರದ ಭಾವಿ ನಾಯಕ. 

ನಾವು ಮತಹಾಕುವುದಿವರಿಗೆ ಆಗಬಹುದೆಂದು ನಮ್ಮೆಲ್ಲರ ರಕ್ಷಕ.
ರಕ್ಷಕ ಆಗುವುದಿರಲಿ ನಮ್ಮ ದೇಶದ ಈಗಿನ ಆರ್ಥಿಕ ಪರಿಸ್ಥಿತಿಯೇ ಸಾರಿ ಹೇಳುತ್ತಿದೆ, ಇವರಾಗಿದ್ದಾರೆ ಕಂತೆ ಕಂತೆಗಳ ಭಕ್ಷಕ. 

ಆ ಕಡೆ ಈ ಕಡೆ ನೋಡಿ, ದಿನವೂ ಇವರ ಕಚ್ಚಾಟ ಕೇಳಿ, ಜನಸಾಮಾನ್ಯ ಆಗುತಿದ್ದಾನೆ ಮೂಕಪ್ರೇಕ್ಷಕ.
ಎಷ್ಟು ತಲೆಕೆಡಿಸಿಕೊಂಡರೂ ನನಗೆ ಮೂಡುವ ಪ್ರಶ್ನೆಯೊಂದೇ, ನೋಡುತ್ತಿದ್ದಾನೆಯೇ ಇಲ್ಲವೇ ಇದನ್ನೆಲ್ಲಾ ಮೇಲಿರುವ ಪರೀಕ್ಷಕ. 

- ಹರ್ಷ ಹೆಮ್ಮಾಡಿ.

Thursday 22 August 2013

ಕನಸು

ನನ್ನ ಬದುಕಿನ ಕರಿಮೋಡ ಸರಿದಿದೆ,
ಮಳೆನೀರಾಗಿ ಗೆಲುವಿನ ಸಮುದ್ರ ಸೇರಿದೆ.

ಕಾಣದ ಶಕ್ತಿಯೊಂದು ನನಗಾದಂತೆ ಖಾಸ,
ಅರಳಿದ ಸುಮಗಳೆಲ್ಲ ನನ್ನನ್ನೇ ನೋಡಿದಂತೆ ಭಾಸ.

ನಾ ಓಡಾಡಲು ಚಿನ್ನದ ಸಾರೋಟ,
ನನ್ಮೇಲೆ ಎಲ್ಲಾ ಹೆಂಗಳೆಯರ ಕಣ್ಣೋಟ.

ನಾ ಗಾಳಿಯಲ್ಲೇ ತೇಲಾಡುತ್ತಿದ್ದೆ ಇದಾಗಿದ್ದರೆ ನನಸು,
ಆದರೆ ಇದೆಲ್ಲಾ ನಿನ್ನೆ ರಾತ್ರಿ ನನಗೆ ಬಿದ್ದ ಕನಸು.

-ಹರ್ಷ ಹೆಮ್ಮಾಡಿ.

Tuesday 20 August 2013

ಪ್ರೇಮ

ಅಪ್ಸರೆಯರ ಗುಂಪಲ್ಲಿ ಕಪ್ಪು ಸೀರೆಯುಟ್ಟವಳ್ಮೇಲೆ ನನಗಾಯ್ತು ಪ್ರೇಮ,
ಕೃಷ್ಣನಾಗಿದ್ದವನು ನಾನದೆ ಅವಳಿಗೋಸ್ಕರ ರಾಮ.

ಅಂದಗಾತಿ ನೀ ನನ್ನ ಹೃದಯ ಮಂದಿರದಲ್ಲಿ ನೆಲೆಸಿರುವ ದೈವ,
ಪೂಜಾರಿ ನಾ ನಿನ್ನ ಪ್ರೆಮಪೂಜೆಗೆ ಕಾದಿರುವೆ ಅಣಿಗೊಳಿಸಿ ಪ್ರೀತಿ ಹೂವ.

ಸುಕೋಮಲೆ ಗೊಂದಲವಾಗಿದೆ ನನಗೆ ನನ್ನನ್ನೇ ನಾ ನಂಬಲಾ,
ಯಾರೊಂದಿಗೂ ಜಾಸ್ತಿ ಮಾತಾಡದವನಿಗೆ ಇಂದು ತುಂಬಾ ಮಾತಾಡುವ ಹಂಬಲ.

ಅಪರೂಪದ ಬಯಕೆಗಳು ಜಾಸ್ತಿ ಮಾಡುತ್ತಿವೆ ವಿರಹ,
ನಾ ಬಳಲಿ ಬೀಳುವ ಮೊದಲು ನೀ ಬರಬಹುದೇ ಸನಿಹ.


- ಹರ್ಷ ಹೆಮ್ಮಾಡಿ.

Monday 19 August 2013

ಬದುಕು

ನಿನ್ನಿಷ್ಟದಂತೆ ನೀ ಬದುಕು ಪ್ರತಿದಿನ,
ಚೌಕಟ್ಟುಗಳಿಂದ್ಯಾಕೆ ಹಾಳುಮಾಡಿಕೊಳ್ಳಬೇಕು ನಮಗಿರುವ ಸುದಿನ.

ಬದುಕುವುದು ಮೂರು ದಿನ ಅದಕ್ಕ್ಯಾಕೆ ನೂರು ವಿಧಾನ,
ಆದರೆ ನ್ಯಾಯದೆಡೆಗೆ ಲಕ್ಷ್ಯವಿರಲಿ ಪ್ರಧಾನ.

ಸುಳ್ಳು ಸೆರಗಿನಲ್ಲಿ ಬಚ್ಚಿಟ್ಟ ಬಸಿರಿನಂತೆ,
ಮುಚ್ಚಿಟ್ಟರೆ ತಪ್ಪಿದ್ದಲ್ಲ ಹೊರಬರುವುದೆಂಬ  ಚಿಂತೆ.

ತಪ್ಪೆಂದು ಕಂಡರೆ ನಿನ್ನನ್ನೇ ನೀ ತದುಕು,
ಕಪಟದ ಗೊಡವೆಯಿಲ್ಲದೆ ನೆಮ್ಮದಿಯಿಂದ ಬದುಕು.


- ಹರ್ಷ ಹೆಮ್ಮಾಡಿ.

Monday 12 August 2013

ನಾಗರಪಂಚಮಿ

ಸಮಸ್ತ ಕುಲಕೋಟಿಗೆ ನಾಗರಪಂಚಮಿಯ ಶುಭಾಶಯ,
ಈ ಶುಭಾಶಯದೊಂದಿಗೆ ನನ್ನದೊಂದು ಕಿರು ಆಶಯ.

ಪೈಪೋಟಿಯಲ್ಲಿ ಹುತ್ತದ ತುಂಬೆಲ್ಲಾ ಎರೆದು ಹಾಲು,
ದಯಮಾಡಿ ಮಾಡಬೇಡಿ ಹಾಲನ್ನು ಮಣ್ಣುಪಾಲು.

ಇದರಿಂದ ನಾಗನಿಗೂ ಇನ್ನುಳಿದ ಸಣ್ಣ ಜೀವಿಗಳಿಗೂ ಮಲಗಲು ಕಷ್ಟ,
ಹಸಿದವರಿಗೆ ದಾನ ಮಾಡಿ ನಾಗನಿಗೂ ಆಗುವುದು ಇಷ್ಟ.


ಎಲ್ಲರೂ ಸ್ವಾರ್ಥ ಬಿಟ್ಟು ಶುಭ್ರ ಮನಸ್ಸಿನಿಂದ ಸ್ಮರಿಸಿ,
ಸಲಹುವನು ಅವನು ನಿಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಿ.

-
ಹರ್ಷ ಹೆಮ್ಮಾಡಿ.

Friday 9 August 2013

ಉಸಿರು

ಈ ಕವಿತೆ ನನ್ನುಸಿರಿಗೆ ಉಸಿರಾಗಿದ್ದ  ಗೆಳತಿಗಾಗಿ,
ನೀ ನನ್ನೊಂದಿಗೆ ಕಳೆದ  ಕೆಲದಿನಗಳ ನೆನಪಿಗಾಗಿ.

ನೀ ಬರುವ ಮೊದಲು ನನ್ನ ಮನಸ್ಸಾಗಿತ್ತು ಬರಡು,
ನಿನ್ನಿಂದ ನನ್ನ ಮನಸ್ಸು ಹಸಿರಾಯ್ತು ಕೊನರಿದಂತೆ ಕೊರಡು.

ಇಂದಿಲ್ಲ ಗೆಳತಿ ಆ ನಿನ್ನ ನನ್ನುಸಿರಿಗೆ ಉಸಿರಾಗಿದ್ದ ಉಸಿರು,
ಉಸಿರಿಲ್ಲದಿದ್ದರೇನಾಯ್ತು ನಿನ್ನ ನೆನಪು ನನ್ನೆದೆಯಲ್ಲಾಗಿದೆ ಇಂದಿಗೂ ಹಸಿರು.

ಪ್ರತಿಕ್ಷಣವೂ ಹಾರೈಸುತ್ತೇನೆ ನಿನ್ನಾತ್ಮವಾಗಿರಲೆಂದು ಸುಖಿ,
ಎದುರುಗೊಳ್ಳಲು ಕಾದಿದ್ದೇನೆ ನಮ್ಮಿಬ್ಬರ ಮುಂದಿನ ಜನ್ಮದ ಮುಖಾಮುಖಿ.



-ಹರ್ಷ ಹೆಮ್ಮಾಡಿ.

Thursday 8 August 2013

ನನ್ನ ಮರೆತುಬಿಡು ನಲ್ಲ

ಏ ಹುಡುಗಿ ಇಂದು ಜಗತ್ತೇ ಕರೆಯುತ್ತಿದೆ ನನ್ನ ಹುಚ್ಚ,
ಏಕೆ ನನ್ನ ಸುಟ್ಟುಬಿಟ್ಟೆ ನನ್ನೆದೆಗೆ ಹಚ್ಚಿ ಪ್ರೀತಿಯ ಕಿಚ್ಚ. 

ಆರಂಭದಲ್ಲಿ ಮಾತ್ರ ನಿನಗೆ ನಶೆ ಏರಿಸಿತ್ತೆ ನನ್ನ ಪ್ರೀತಿ,
ನಾನಿನ್ನು ಆ ಅಮಲಿನಲ್ಲಿರಲು ನಿನಗೆ ಹೇಗೆ ನೆನಪಾಯ್ತು ಜಾತಿ. 

ಇನ್ನೂ ಇದೆ ನನ್ನಲ್ಲಿ ಆ ದಿನಗಳಲ್ಲಿ ನೀ ಕೊಟ್ಟ ಪ್ರೇಮದ ಓಲೆ,
ಓದಿದಾಗಲೆಲ್ಲ ನಿನ್ನ ಸ್ವಾರ್ಥದ ನೆನಪಾಗಿ ಕುದಿಯುತ್ತಿದೆ ನನ್ನೆದೆಯಲ್ಲಿ ಜ್ವಾಲೆ. 

ಬೇಜಾರು ನನಗೆ, ಇಂದು ನಾ ಬದುಕುತ್ತಿರುವ ಬದುಕು ನನದಲ್ಲ,
ಹೀಗಾಗಲು ಕಾರಣ, ನೀನಾಡಿದ ಮಾತು "ನನ್ನ ಮರೆತುಬಿಡು ನಲ್ಲ".  


- ಹರ್ಷ ಹೆಮ್ಮಾಡಿ.

Tuesday 6 August 2013

ಹರ್ಷ ಉವಾಚ-೬

"ಎಲ್ಲಾ ಕಿಟಕಿ ಬಾಗಿಲುಗಳು ಮುಚ್ಚಿದ್ದರೂ ವಾತಾಯನ ಕಿಟಕಿ ಸದಾ ತೆರೆದೇ ಇರುತ್ತದೆ,
ಒಂದು ವೇಳೆ ಅದಕ್ಕೂ ಜಾಲರಿ ಅಳವಡಿಸಿದ್ದರೆ ರಂಧ್ರ ಇರಲೇಬೇಕಲ್ಲವೇ."

ದೂರಾಲೋಚನೆ, ದುರಾಲೋಚನೆಯಂತೂ ಖಂಡಿತಾ ಅಲ್ಲ. 


- ಹರ್ಷ ಹೆಮ್ಮಾಡಿ. 

ಹರ್ಷ ಉವಾಚ-೫

"ಮೇಲ್ನೋಟಕ್ಕೆ ಯಾವತ್ತೂ ಆಗಬೇಡ ಪರವಶ, ಬಹುಶಃ ಒಳಾರ್ಥವಾದ ಮೇಲೆ ನೀನಾಗಬಹುದು ವಿಧಿವಶ".


- ಹರ್ಷ ಹೆಮ್ಮಾಡಿ

ಹರ್ಷ ಉವಾಚ-೪

ತಪ್ಪು ಮಾಡಿದಾಗ ಸರ್ವಾಧಿಕಾರಿಯಂತೆ ತಿದ್ದುವ, ಕಷ್ಟ ಬಂದಾಗ ನಮ್ಮ ಸೇವೆಗೆ ಸೈನಿಕನಂತೆ ನಿಲ್ಲುವ, ಏನನ್ನಾದರೂ ಸಾಧಿಸಿದಾಗ ಆ ಖುಷಿಯನ್ನು ದ್ವಿಗುಣಗೊಳಿಸುವ, ಜಾತಿ-ಅಂತಸ್ತು, ದೇಶ-ಭಾಷೆ ಎಲ್ಲಾ ಎಲ್ಲೆಗಳನ್ನು ಮೀರಿದ ಒಂದು ಸುಂದರ ಸಂಬಂಧವೇ ಸ್ನೇಹ.

-
ಹರ್ಷ ಹೆಮ್ಮಾಡಿ.

ಹರ್ಷ ಉವಾಚ-೩

ಸ್ವಂತ ಸಂಬಂಧಿಯಲ್ಲದಿದ್ದರೂ ಸ್ವಾರ್ಥವಿಲ್ಲದೆ ಸುತ್ತಲಿನವರನ್ನು ಸದಾ ಸಂತಸದಲ್ಲಿಡುವವ(ನೇ+ಳೇ) ಸಹಜ ಸ್ನೇಹಿ(ತ+ತೆ)”.

-
ಹರ್ಷ ಹೆಮ್ಮಾಡಿ.

ಹರ್ಷ ಉವಾಚ-೨

"ಸಂದೇಹವೆಂಬ ಬಿರುಕು, ಪ್ರೀತಿಯೆಂಬ ಕನ್ನಡಿಯಲ್ಲಿ ಮೂಡಿದರೆ, ಎಲ್ಲಿಂದ ಕಾಣುವುದು ನಂಬಿಕೆಯೆಂಬ ಶುಭ್ರ ಪ್ರತಿಬಿಂಬ."

-
ಹರ್ಷ ಹೆಮ್ಮಾಡಿ.

ಹರ್ಷ ಉವಾಚ-೧

ರಾಜಕಾರಣಿಯೂ ಉರಿಯುವ ದೀಪದಂತೆ, ಕಾರ್ಯಗಳಲ್ಲಿ ಕೊಂಚ ವ್ಯತ್ಯಾಸವಷ್ಟೇ.
ದೀಪವು ತನ್ನ ಸುತ್ತಲೂ ಕತ್ತಲಿದ್ದರು ನಮಗೆಲ್ಲಾ ಬೆಳಕು ಕೊಡುತ್ತದೆ,
ರಾಜಕಾರಣಿ ತಾನು ಬೆಳಕಲ್ಲಿದ್ದುಕೊಂಡು ನಮ್ಮನ್ನೆಲ್ಲಾ ಕತ್ತಲಿನಲ್ಲಿಡುತ್ತಾನೆ".

(
ಕೆಲವರಿಗೆ ಮಾತ್ರ ಅನ್ವಯ )

-
ಹರ್ಷ ಹೆಮ್ಮಾಡಿ.

ಪ್ರತಿಸ್ಪರ್ಧಿ

ಸುತ್ತ ನೋಡಿದರೂ ಎತ್ತೆತ್ತಲೂ ಪ್ರತಿಸ್ಪರ್ಧಿ,
ಪರಿಯಿಲ್ಲ ನಿನಗೆ ಹೋರಾಡಲೇಬೇಕು ಬಂದಾಗ ನಿನ್ನ ಸರದಿ. 

ಜೀವನವೇ ಹೀಗೆ ಕಣೋ ಇದೊಂದು ಜಿದ್ದಿ,
ಜೋಕೆ ತಮ್ಮಾ ಜಿದ್ದಿ ಮಾಡಲು ಹೋಗಿ ನೀ ಬಿದ್ದಿ. 

ಏಳದೇ ಬೀಳದೆ ನಾನು ನನ್ನದೆನ್ನದೆ ಈ ಜಿದ್ದಿಯಲಿ ಗೆದ್ದಿಯಾದ್ರೆ,
ಮಾಡಬಹುದು ನೀ ಮುಂದೆ ಸುಖ ನಿದ್ದಿ.



ಹರ್ಷ ಹೆಮ್ಮಾಡಿ.

ದೊಣ್ಣೆನಾಯಕ

ಯಾರಿಗೆ ಯಾರಿಲ್ಲಿ ದೊಣ್ಣೆನಾಯಕ,
ಹುಟ್ಟಿದಮೇಲೆ ಮಾಡಲೇಬೇಕು ಅವರವರ ಕಾಯಕ.

ಜೀವನವೆಂಬ ದೋಣಿಯಲ್ಲಿ ಪ್ರತಿಯೊಬ್ಬನು ಪ್ರಯಾಣಿಕ,
ಮೇಲಿದ್ದಾನೆ ಕೇಳಿ ನಮ್ಮೆಲ್ಲರ ನಾವಿಕ.

ಹುಟ್ಟಿ ಸಾಯುವವರೆಗೂ ಜೀವನವೊಂದು ರೋಚಕ,
ಕೊನೆಯವರೆಗೂ ಓದಿ ಮುಗಿಸಲು ಸಾಧ್ಯವಿಲ್ಲ ಜೀವನದ ಪುಸ್ತಕ.

-
ಹರ್ಷ ಹೆಮ್ಮಾಡಿ.

ಪೂಜಾರಿ

ನನ್ನ ಹೆಸರು ಹರ್ಷ ಆರ್ ಪೂಜಾರಿ,
ನನಗೊಬ್ಬಳು ಗೆಳತಿ ಅವಳು ತುಂಬಾ ಬಜಾರಿ.

ಪ್ರತಿನಿತ್ಯ ಆದಿ ಅಂತ್ಯ ಕಾಣಲು ನನ್ನ ದಿನಚರಿ,
ಆಗಲೇಬೇಕು ಅವಳ ಕರೆ ಸಂದೇಶಗಳ ಹಾಜರಿ.

ಉಟ್ಟಾಗ ಸೀರೆ ಕಾಣ್ತಾಳೆ ದೇವತೆಯಂತೆ ನನ್ನ ನಾರಿ. 
ಆದರೆ ನಡೆಯಲಾಗದೆ ಬೀಳ್ತಾಳೆ ಆಗಾಗ ಕಾಲು ಜಾರಿ.

ನಟನೆಯಲ್ಲಿ ನಟಭಯಂಕರಿ ನಾಟ್ಯದಲ್ಲಿ ಮಯೂರಿ,
ಮುನಿಸಿಕೊಂಡಾಗ ನನಗನಿಸುವುದು ಇವಳೇನಾ ಮಹಿಷಾಸುರಿ.

ಅವಳನ್ನು ಖುಷಿಪಡಿಸಬೇಕಾದಾಗಲೆಲ್ಲ ಕಾಲಿಯಾಗುತ್ತೆ ನನ್ನ ತಿಜೋರಿ,
ಯಾಕೆಂದರೆ ನನ್ನ ನೀರೆಯ ಬಯಕೆಗಳೆಲ್ಲ ಸ್ವಲ್ಪ ತುಟ್ಟಿ ರೀ.

-
ಹರ್ಷ ಹೆಮ್ಮಾಡಿ.

ಮಳೆಗಾಲ

ಮಳೆಗಾಲದಲ್ಲಿ ಚಳಿ ಜಾಸ್ತಿಯಾಗಿ ಅವಳಿಗಿದ್ದರೂ ಇನ್ನೊಂದು ಸೆಟಪ್,
ಪ್ರಪೋಸ್ ಮಾಡಿಯೇ ಬಿಟ್ಟೆ ನಾನಾಗಿರ್ತೀನಿ ಎಂದು ಬ್ಯಾಕಪ್.

ಪ್ರಪೋಸಲ್ ಒಪ್ಪಿಕೊಂಡ ಮರುಕ್ಷಣವೇ ಆಗೋಯ್ತು ಬ್ರೇಕಪ್,
ಯಾಕೆಂದರೆ ಮಳೆ ಜಾಸ್ತಿಯಾಗಿ ತೊಳೆದೋಯ್ತು ಅವಳ ಮೇಕಪ್.

-
ಹರ್ಷ ಹೆಮ್ಮಾಡಿ.

ಪ್ರಾಣಕಾಂತೆ

ಎಂದಿನಂತೆ ಇಂದೂ ಕಾಡುತ್ತಿರುವುದು ನಿನ್ನದೇ ಚಿಂತೆ,
ಅಂದು ಇಂದು ಎಂದೆದಿಗೂ ನೀನೇ ನನ್ನ ಪ್ರಾಣಕಾಂತೆ.

ಪರಿಚಯಕ್ಕೆ ಮುನ್ನ ನೀ ನನ್ನ ನೋಡುತ್ತಿದ್ದಿದ್ದು ತಿಳಿದಿದ್ದರೂ ಇರುತ್ತಿದ್ದೆ ತಿಳಿಯದವನಂತೆ,
ಸ್ನೇಹವಾದ ಮೇಲೆ ನಾ ನನ್ನನೇ ಕಳೆದುಕೊಂಡೆ ನಿನ್ನ ಧ್ಯಾನದಲ್ಲಿ ನನಗರಿವಿಲ್ಲದಂತೆ.

ಮರೆಯಲಾಗುತ್ತಿಲ್ಲ ನಾ ನಿನ್ನ ಒಪ್ಪಿದಾಗ ನೀ ಕುಣಿದದ್ದು ಮರುಜನ್ಮ ಪಡೆದಂತೆ,
ಮೊದಲ ಬಾರಿ ನೀ ನನ್ನ ಚುಂಬಿಸಿದಾಗ ನಾ ಬಿದ್ದಿದ್ದು ಪ್ರಜ್ಞೆ ತಪ್ಪಿದಂತೆ.

ನೆನಪಿದೆಯಾ ನಿನಗೆ ನಾವಿಬ್ಬರು ಕೈ ಕೈ ಹಿಡಿದು ಸುತ್ತಾಡಿದ ಕುಂದಾಪುರ ಸಂತೆ,
ನಾವಿಬ್ಬರು ಸೇರಿ ಮರಳಿನ ಮನೆ ಮಾಡಿದ ಆ ಕಡಲ ತೀರ ಮರವಂತೆ.

ಅಂದೆಲ್ಲಾ ನಾ ಸೂರ್ಯನಿಗೇ ಕೊಡೆ ಹಿಡಿದಿದ್ದೆ ನಿನ್ನ ಮೈ ಬಿಸಿಲಿಗೆ ಬಾಡದಂತೆ,
ಆದರೆ ಇಂದು ನೀ ನನಗೆ ಒಂದು ಮಾತೂ ಹೇಳದೆ ಎಲ್ಲಿ ಹೋದೆ ಹಿಂದಿರುಗಿ ಬಾರದಂತೆ.

ಎಂದಿನಂತೆ ಇಂದೂ ಕಾಡುತ್ತಿರುವುದು ನಿನ್ನದೇ ಚಿಂತೆ,
ಅಂದು ಇಂದು ಎಂದೆದಿಗೂ ನೀನೇ ನನ್ನ ಪ್ರಾಣಕಾಂತೆ.

-
ಹರ್ಷ ಹೆಮ್ಮಾಡಿ.

ಮೊದಲ ಪ್ರೀತಿ

ಅವಳನ್ನು ಮೊದಲ ಬಾರಿ ಕಂಡೊಡನೆಯೇ ಎನ್ನೆದೆಯಲ್ಲಾಯಿತು ಪ್ರೀತಿಯ ನೆಲೆ,
ಮೊದಲ ಪ್ರೀತಿಯಾದ್ದರಿಂದ ಜಾಸ್ತಿನೇ ಅಬ್ಬರಿಸುತಿತ್ತು ಆಸೆಗಳ ಅಲೆ. 

ಮುಗ್ದೆ ಅವಳು ಅದೇನೋ ನಂಬಿಕೆಯಿಂದ ಪುಸ್ತಕದಲ್ಲಿಟ್ಟಿದ್ದಳು ಅಶ್ವಥದ ಎಲೆ,
ಮನೆ ಬಿಟ್ಟರೆ ಕಾಲೇಜು ಮಧ್ಯದಲ್ಲೆಲ್ಲೂ ಎತ್ತುತ್ತಲೇ ಇರಲಿಲ್ಲ ಅವಳ ತಲೆ.

ನನ್ನತ್ತ ನೋಡುತ್ತಲೇ ಇರಲಿಲ್ಲ ಬಳಸಿದ್ದರೂ ನನ್ನಲ್ಲಿರುವ ಎಲ್ಲಾ ಕಲೆ,
ಯಾಕೆಂದರೆ ಅವಳ ಸುತ್ತಲೂ ಹರಡಿತ್ತು ಜಾತಿಯೆಂಬ ಭಯದ ಬಲೆ.

ನನ್ನ ಪರದಾಟ ನೋಡಿ ಅಪರೂಪಕ್ಕೆ ಮೂಡುತ್ತಿತ್ತು ಅವಳ ತುಟಿಯಂಚಲ್ಲಿ ನಗುವಿನ ಸೆಲೆ,
ಅರ್ಥವಾಗಿದ್ದದರಿಂದಲೇ ಅವಳಲ್ಲೆಲ್ಲೋ ಇರಬಹುದೆಂದು ನನ್ನ ಪ್ರೀತಿಗೊಂದು ಬೆಲೆ.

ಹಾಗೋ ಹೀಗೋ ಬರೆದೇ ಬಿಟ್ಟೆ ಅವಳಿಗೊಂದು ಒಲವಿನ ಓಲೆ,
ಕರ್ಮಕ್ಕೆ ಅವಳಪ್ಪನ ಕೈಗೆ ಸಿಕ್ಕಿ ಪ್ರೀತಿಯಾಗುವ ಮೊದಲೇ ಆಯ್ತದರ ಕೊಲೆ.

-
ಹರ್ಷ ಹೆಮ್ಮಾಡಿ.

ಅಪ್ಸರೆ

ನನಗಾಗಿಯೇ ಧರೆಗಿಳಿದ ಅಪ್ಸರೆ ನೀ,
ನಿನಾಗಿಗೆಯೇ ಕಾದಿರುವನು ಈ ಸೇನಾನಿ.

ಸಹಸ್ರ ವಜ್ರಗಳು ಒಟ್ಟಿಗೇ ಪ್ರಜ್ವಲಿಸಿದಂತೆ ನಗುವ ಚಕೋರಿ,
ಗಂಗಾ ಕಾವೇರಿಯರು ಉಕ್ಕಿ ಹರಿದಂತೆ ಅಳುವ ಸಿಂಗಾರಿ.

ರವಿವರ್ಮನ ಕುಂಚವೇ ಜಾರುವಂತ ಮೈಕಾಂತಿಯ ಕೋಮಲೆ,
ಕಾಳಿದಾಸನ ವರ್ಣನೆಗೂ ನಿಲುಕದ ಬೆಳದಿಂಗಳ ಬಾಲೆ.

ಕೋಟಿ ಕೋರಿಕೆಗಳು ಈಡೇರಿದಂತೆ ಎದುರು ನಿಂತರೆ ನನ್ನ ಪಾವನಿ,
ನಿನ್ನ ಒಂದೊಂದು ಸ್ಪರ್ಶವೂ ಸತ್ತವನನ್ನೂ ಬದುಕಿಸುವ ಸಂಜೀವಿನಿ. 

ನನಗಾಗಿಯೇ ಧರೆಗಿಳಿದ ಅಪ್ಸರೆ ನೀ,
ನಿನಾಗಿಗೆಯೇ ಕಾದಿರುವನು ಈ ಸೇನಾನಿ. 

-
ಹರ್ಷ ಹೆಮ್ಮಾಡಿ.

ನೀನು

ನಿನ್ನ ರೂಪಕೆ ಮರುಳಾದೆ ನಾನು, ನನ್ನ ಗೆದ್ದೆ ನೀನು,
ಕವಿಯಾಗಿ ಕವಿತೆ ಬರೆದೆ ನಿನಗೆ ಸೋತು ನಾನು.

ಚಂದ್ರನ ತುಣುಕೇ ಹೆಣ್ಣಾಗಿ ಬಂದಂತೆ ನೀನು,
ರೆಪ್ಪೆ ಮಿಟುಕಿಸದೇ ನಿನ್ನ ನೋಡುವಾಸೆ ನಾನು.

ಕಾಮನಬಿಲ್ಲಿನಂತಿರುವ ಕುಡಿಹುಬ್ಬಿನ ಚೆಲುವೆ ನೀನು,
ಖಡ್ಗದಂಚಿನತಿರುವ ಕುಡಿಮೀಸೆಯ ಚೆಲುವ ನಾನು.

ಈಗಷ್ಟೇ ಅರಳಿದ ಕೆಂಗುಲಾಬಿ ಸೋಕಿದಂತಿರುವ ನಿನ್ನ ತುಟಿ,
ಸತಾಯಿಸುತ್ತಿದೆ ನನ್ನಾಸೆಗಳನ್ನು ಮೀಟಿ ಮೀಟಿ.

ನಿನ್ನ ಸೌಂದರ್ಯವೇ ಏನೋ ಒಂದೊಂದು ನೆನಪು,
ನೆನೆಸಿಕೊಂಡರೆ ನನ್ನಲ್ಲೇನೋ ಹೇಳಲಾಗದ ಹೊಳಪು.

ನೀ ನಡೆಯುವ ಹಾದಿಯಲ್ಲಿ ಹೂವಾಗುವ ಆಸೆ ಗೆಳತಿ,
ಮೃದುವಾಗಿ ನಡಿ ಮಹಾರಾಯ್ತಿ, ನನ್ನ ಮೂಳೆ ಮುರಿದರೆ ಪಚೀತಿ. 

- ಹರ್ಷ ಹೆಮ್ಮಾಡಿ.

ಬಾಲ್ಯ

ಎಷ್ಟೊಂದು ಮಧುರ ಆ ಬಾಲ್ಯದ ನೆನಪು,
ಬೆಳೆದಂತೆ ಮಾಯವಾಗುತ್ತಿದೆ ಅಷ್ಟೊಂದು ಹೊಳಪು.

ಬೇಡ ಬೇಡ ಎಂದರೂ ಮುದ್ದಿಸಿ ಒತ್ತಾಯಿಸಿ ಊಟ ತಿನ್ನಿಸುತ್ತಿದ್ದಳು ಅಮ್ಮ,
ಈಗ ಮನೆಯಿಂದ ಕೊಂಚ ದೂರ ಬಂದಿರುವುದರಿಂದ ಕಾಡುತ್ತಿದೆ ಏಕಾಂಗಿಯೆಂಬ ಗುಮ್ಮ.

ಅದೆಷ್ಟೋ ಖುಷಿ ಅಮ್ಮನ ಕಣ್ಣು ತಪ್ಪಿಸಿ ಮನೆ ಹಿಂದಿನ ನದಿಗೆ ಆಗಾಗ ಈಜಲು ತೆರಳಿದ್ದು,
ನೆನೆದರೆ ಈಗಲೂ ಬೆಚ್ಚಿಬೀಳುತ್ತೇನೆ ನಾ ಒಮ್ಮೆ ಸುಳಿಯಲ್ಲಿ ಸಿಲುಕಿದ್ದು.

ಹುಟ್ಟು ತರ್ಲೆ ನಾನು ಆಗೆಲ್ಲಾ ಮಾಡುತ್ತಿದ್ದೆ ತುಂಬಾನೇ ಮೋಜು,
ಇಂದೇಕೋ ಗೊತ್ತಿಲ್ಲ ಬೆಳೆಯುತ್ತಿದ್ದೇನೆ ನಾನು ಅಡಗಿದೆ ನನ್ನೆಲ್ಲಾ ಗೌಜು.

ಅನಿಸಿದ್ದೆಲ್ಲವನ್ನು ಆಗ ಒಮ್ಮೆಯಾದರೂ ಪ್ರಯತ್ನಿಸುವ ಗೀಳು,
ಈಗಲೂ ಅನಿಸುತ್ತೆ ಯಾವನಿಗೆ ಬೇಕು ಆ ಗೋಳು.

ಆ ಮುಗ್ದ ಅರಿವಿರದ ಬಾಲ್ಯದ ಶಾಲಾ ದಿನಗಳು ಆಗಿತ್ತು ತುಂಬಾ ಸಿಹಿ,
ಈ ಎಲ್ಲಾ ತಿಳಿದಿರುವ ಯೌವನದ ಕಾಲೇಜು ಕಛೇರಿ ದಿನಗಳು ಅಲ್ಲಲ್ಲಿ ಕಹಿ.

ಎಷ್ಟೊಂದು ಮಧುರ ಆ ಬಾಲ್ಯದ ನೆನಪು,
ಬೆಳೆದಂತೆ ಮಾಯವಾಗುತ್ತಿದೆ ಅಷ್ಟೊಂದು ಹೊಳಪು.

-
ಹರ್ಷ ಹೆಮ್ಮಾಡಿ.

ಜೀವನ

ಜೀವನದಲ್ಲಿ ಎಲ್ಲವೂ ಕ್ಷಣಿಕ, ನಿನ್ನಲ್ಲಿರುವ ಹಣ, ಸಮಯ, ಸಂಬಂಧ ನೆಪ ಮಾತ್ರ,
ಕೊನೆಗುಳಿಯುವುದು ನಿನಗೆ, ನೀ ಮತ್ತು ಅದುವರೆಗು ಕಳೆದ ನೆನಪು ಮಾತ್ರ.

ಸಮಸ್ಯೆಗಳು ಬಂದಾಗ ಬದುಕುವುದೇ ಕಷ್ಟವೆಂದರೆ ಅದು ಮಹಾ ತಪ್ಪು,
ಸಮಸ್ಯೆಗಳನ್ನು ಸರಿದೂಗಿಸಿಕೊಂಡು ಬದುಕುವುದೇ ಜೀವನವೆಂಬುದ ನೀ ಒಪ್ಪು.

ಇಲ್ಲಿ ಬಡವನು ಮಾತ್ರವಲ್ಲ ಶ್ರೀಮಂತನೂ ಕೂಡ ಸಮಸ್ಯೆಗಳನ್ನು ಹೊಂದಿರುತ್ತಾನೆ,
ಪ್ರತಿಯೊಬ್ಬನೂ ಸಮಸ್ಯೆಯ ಹುಟ್ಟನ್ನು ತಿಳಿದರೆ ಮಾತ್ರ ಬುದ್ಧಿವಂತರ ಸಾಲಿನಲ್ಲಿ ನಿಲ್ಲುತ್ತಾನೆ.

ಮೇಲಿರುವವನು ಸಮಸ್ಯೆಗಳ ಬೀಜಗಳನ್ನು ಬಿತ್ತಿ ಆಡಿಸುತ್ತಾನೆ ಎನ್ನುವವನು ಆಸ್ತಿಕ,
ಮೇಲ್ಯಾರೂ ಇಲ್ಲ ನನ್ನ ಸಮಸ್ಯೆಗಳಿಗೆ ನಾನೇ ಕಾರಣ ಎನ್ನುವವನು ನಾಸ್ತಿಕ.

ಆಸ್ತಿಕನೋ ನಾಸ್ತಿಕನೋ ಸಮಸ್ಯೆಗಳಿಗೆ ಹೆದರಿದರೆ ನೀ ಇಲಿ,
ಬಡವನೋ ಶ್ರೀಮಂತನೋ ಸಮಸ್ಯೆಗಳಿಗೇ ಹೆದರಿಸಿದರೆ ನೀ ಹುಲಿ.

ಜೀವನದಲ್ಲಿ ಎಲ್ಲವೂ ಕ್ಷಣಿಕ, ನಿನ್ನಲ್ಲಿರುವ ಹಣ, ಸಮಯ, ಸಂಬಂಧ ನೆಪ ಮಾತ್ರ,
ಕೊನೆಗುಳಿಯುವುದು ನಿನಗೆ, ನೀ ಮತ್ತು ಅದುವರೆಗು ಕಳೆದ ನೆನಪು ಮಾತ್ರ.

-
ಹರ್ಷ ಹೆಮ್ಮಾಡಿ.