Saturday 28 September 2013

ಕ್ಷಮೆ

ನನ್ನವಳ ಮುನಿಸಿನ ಕೋಟೆಯೊಳಗೂ ನನ್ನ ಮೇಲೆ ಪ್ರೀತಿಯಿತ್ತು,
ಕೋಟೆಯೊಳಹೊಕ್ಕರೆ ರಾಶಿ ರಾಶಿ ಮುತ್ತಿನ ಮೂಟೆಯಿತ್ತು.

ಕೆಲವುದಿನಗಳಿಂದ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು ನೀ ದೂರ ಹೋಗು,
ನಿಜ ಹೇಳಬೇಕೆಂದರೆ ಇಬ್ಬರಿಗೂ ನಿದ್ದೆ ಬರಲ್ಲ ಆಗದೇ ಕರೆಸಂದೇಶಗಳ ಕೂಗು.

ಇಬ್ಬರಿಗೂ ಸ್ವಾಭಿಮಾನ ಯಾವುದೋ ಒಂದು ಸಣ್ಣ ವಿಷಯಕ್ಕೆ ಮನಸ್ತಾಪ,
ಸ್ವಾಭಿಮಾನ ದುರಾಭಿಮಾನವಾಗದಿರಲೆಂದು ನಾನೇ ಮಾಡಿದೆ ಕ್ಷಮೆಯ ಪ್ರಸ್ತಾಪ.

ಮನಸ್ಫೂರ್ತಿಯಾಗಿ ಅವಳಿಗೋಸ್ಕರ ಸೋಲುವುದರಲ್ಲೂ ಒಂದು ಖುಷಿಯಿತ್ತು,
ಕ್ಷಮಿಸೆಂದ ಮರುಕ್ಷಣವೇ ನನ್ನ ಪ್ರೀತಿ ಬಂದು ಗಟ್ಟಿಯಾಗಿ ನನ್ನ ತಬ್ಬಿತ್ತು.


-ಹರ್ಷ ಹೆಮ್ಮಾಡಿ.

Thursday 26 September 2013

ಶಿಕ್ಷೆ

ನಿನ್ನ ಹೃದಯವೇ ನನ್ನಿಂದ ಘಾಸಿಯಾದಮೇಲೆ ಹೇಳಲೇನುಳಿದಿದೆ ಗೆಳತಿ,
ಯಾವ ನಿಯಮದಡಿ ಶಿಕ್ಷೆ ಕೊಟ್ಟರೂ ಈ ಪಾಪಕ್ಕಿಲ್ಲ ಮುಕುತಿ.

ಮುಂಗೋಪಿ ನಾ ಮನಬಂದಂತೆ ನಿನ್ನ ಬೈದೆ,
ನೀ ಮರುಮಾತನಾಡದೆ ಬರೀ ಮೌನದಲ್ಲೇ ನನ್ನ ಕೊಂದೆ.

ಅಪೇಕ್ಷಿಸದೇ ಬಂದೆ ನೀ ನನ್ನ ಬಾಳಲ್ಲಿ,
ಇಷ್ಟವಾದಮೇಲೆ ಸಿಗದೇ ಹೋದೆ ನೀ ನನ್ನ ತೋಳಲ್ಲಿ.

ಇಂದು ನಿನ್ನ ಮೃದು ಮಧುರ ಮಾತುಗಳು ಬರೀ ನೆನಪು ಮಾತ್ರ,
ತಿಳಿಯುತ್ತಿಲ್ಲ ಗೆಳತಿ ಹೇಳಲೀ ನನ್ನೀ ನೋವುಗಳನ್ನು ಯಾರ ಹತ್ತಿರ.


-ಹರ್ಷ ಹೆಮ್ಮಾಡಿ.

Wednesday 25 September 2013

ಸಿಟ್ಟು

ಸೋಲು ಗೆಲುವು ಹಂಚಿಕೊಳ್ಳುತ್ತೇನೆಂದು ಬಂದವಳು,
ನನ್ನ ಸಿಟ್ಟಿಗೆ ಸೋತು ಅಂಚೆ ವಿಳಾಸವೂ ಹೇಳದೇ ಹೊರಟಳು.

ಸಂತೆ ಮುಗಿದಮೇಲೆ ಖಾಲಿ ಬೀದಿಯಲ್ಲಿ ಒಬ್ಬನೇ ಕುಳಿತಂತೆ ಭಾಸ,
ಅಲ್ಲಿ ಉಳಿದಿರುವ ಪ್ರಾಣಿಪಕ್ಷಿಗಳೇ ನನಗೀಗ ಆದಂತೆ ಖಾಸ.

ಊರೇ ಮುಳುಗಿದರೂ ನಾ ಬದಲಿಸೋಲ್ಲ ನನ್ನ ಸ್ವಭಾವ,
ನನಗೆಂದೂ ಕಾಡುವುದಿಲ್ಲ ಆತ್ಮಸ್ಥೈರ್ಯದ ಅಭಾವ.

ನಾನಾಡಬೇಕಾದ ಮಾತಿನ್ನು ಒಂದೂ ಉಳಿದಿಲ್ಲ,
ಬರದೇ ಇರು ಮತ್ತೊಮ್ಮೆ ಆ ಪ್ರೀತಿಯೂ ನಿನಗಿನ್ನು ಸಿಗುವುದಿಲ್ಲ.


- ಹರ್ಷ ಹೆಮ್ಮಾಡಿ.

Tuesday 24 September 2013

ಗೆಳೆಯ

ಬಹಳ ದಿನಗಳ ನಂತರ ಬಂದ ನನ್ನ ಗೆಳೆಯ,
ತೊಳೆದು ಹೋದ ಮನಸ್ಸಿನಲ್ಲಿದ್ದ ಬೇಜಾರಿನ ಕೊಳೆಯ.

ಯಾರನ್ನೂ ಅತೀ ಹತ್ತಿರಕ್ಕೆ ಸೇರಿಸದ ಈ ಹರ್ಷ,
ಗೊತ್ತಾಗಲೇ ಇಲ್ಲ ನಿನ್ನೊಂದಿಗೆ ಕಳೆದದ್ದು ಒಂದು ವರ್ಷ.

ಮೊದಮೊದಲು ಸ್ವಲ್ಪ ಕಿತ್ತಾಡುತ್ತಿದ್ದೆವು ನಾವು,
ಬರಬರುತ್ತಾ ಕಿತ್ತಾಟ ನಿಂತು ಹೆಚ್ಚಾಯ್ತು ಸ್ನೇಹದ ಕಾವು.

ಎಲ್ಲೋ ಒಂದುಕಡೆ ನೋವಾಗುತ್ತಿದೆ ನಿನ್ನ ಅಗಲುವಿಕೆ,
ಮುಂದೆಂದಾಗುವುದೆಂದು ಕಾಯುತ್ತಿದ್ದೇನೆ ನಿನ್ನ ಬರುವಿಕೆ.


-ಹರ್ಷ ಹೆಮ್ಮಾಡಿ.

Sunday 22 September 2013

ಮರಳಿ ಬಾ ಪ್ರೀತಿ

ಬಾ ಪ್ರೀತಿ ಮರಳಿ ಮನದಂಗಳಕೆ ನನ್ನೆಲ್ಲಾ ತಪ್ಪುಗಳನ್ನು ಮಾಡಿ ಮಾನ್ಯ,
ನೀನಿಲ್ಲದ ಈ ಬದುಕಿಗೆ ಅರ್ಥವೇ ಇಲ್ಲ ಇದು ಬರೀ ಶೂನ್ಯ.

ಮನದ ಸುತ್ತಲೂ ತುಂಬಿಹುದು ಬರೀ ಕಪ್ಪುಗಟ್ಟಿದ ಕತ್ತಲು,
ಮೆತ್ತಲು ನಿನ್ನ ಪ್ರೀತಿ ಹೊದಿಕೆಯಿಲ್ಲದೆ ನನ್ನ ಹೃದಯವಾಗಿದೆ ಬೆತ್ತಲು.

ಕಾಡಬೇಡ ನೀ ಚೆಲುವೆ ನನ್ನ ಪ್ರತಿಕ್ಷಣ ಪ್ರತಿದಿನ,
ನೋಡಬೇಕಾದರೆ ಬೇಗ ಬಾ ನಾ ಬದುಕಿರುವುದಿನ್ನು ಮೂರೇ ದಿನ.

ಬೆಂಕಿ ನೀ ಬಂದರೆ ಬೆಣ್ಣೆಯಂತೆ ಕರಗುವನು ಈ ಹರ್ಷ,
ಬಾ ಪ್ರೀತಿ ಮತ್ತೊಮ್ಮೆ ಮಾಡಿಸು ನನಗೆ ನಿನ್ನ ಸ್ಪರ್ಷ. 


-ಹರ್ಷ ಹೆಮ್ಮಾಡಿ.

Saturday 21 September 2013

ಏಕಾಂಗಿ

ಒಂಟಿತನದಲ್ಲಿರುವ ಸುಖ ಯಾವ ಜಂಟಿತನದಲ್ಲೂ ಇಲ್ಲ,
ಏಕಾಂತದಲ್ಲಿದ್ದಾಗ ಹೊಳೆಯುವ ವಿಚಾರಗಳ ರುಚಿ ಏಕಾಂಗಿಯೇ ಬಲ್ಲ.

ನಿನಗೆ ನಿನ್ನ ಬೆಲೆ ತಿಳುಯುವುದು ನೀನಾಗಿದ್ದಾಗ ಏಕಾಂಗಿ,
ಒಂಟಿಬಾಳೇ ಲೇಸು ಕಣ್ರೀ ಜೊತೆ ಬಯಸಿ ಆಗುವುದಕ್ಕಿಂತ ಕೋಡಂಗಿ.

ಹಿರಿಯರ ಮಾತಿನಂತೆ ಮನುಷ್ಯ ಸಂಘಜೀವಿ ನಿಜ,
ಆದರೆ ಇನ್ನೊಬ್ಬರೊಂದಿಗೆ ಬೆರೆಯದ ಮಾತ್ರಕ್ಕೆ ಇಲ್ಲವೆಂದೇನಲ್ಲ ಮಜಾ.

ಯಾರೋ ನಮಗಿದ್ದಾರೆನ್ನುವ ವಿಷಯವೇ ಇಲ್ಲಿ ಅನಗತ್ಯ,
ಬದುಕಲು ನಿನ್ನ ಮೇಲೆ ನಿನಗೆ ಭರವಸೆ ಅಗತ್ಯ.


-ಹರ್ಷ ಹೆಮ್ಮಾಡಿ.

Wednesday 18 September 2013

ಬೆಂಬಲ

ಯಾರಿಗಿಲ್ಲಿ ಯಾರ ಬೆಂಬಲ,
ಎಲ್ಲರಲ್ಲಿಯೂ ಬರೀ ಸ್ವಾರ್ಥ ಹಂಬಲ.

ವಾಸ್ತವದ ಅರಿವಿಲ್ಲದವರದ್ದೂ ಚೀರಾಟ,
ಇದೇ ಅಲ್ವೇ ಅಪ್ರಯೋಜಕ ಹೋರಾಟ.

ಹೊಸತನಕ್ಕೊಗ್ಗಿಕೊಳ್ಳುವ ಗುಣ ನಮ್ಮಲ್ಲಿದ್ದರೆ ಮಾತ್ರ,
ಸಮಾಜದಲ್ಲಿ ಅಪೇಕ್ಷಿಸಬಹುದು ಅಭಿವೃದ್ಧಿ ಸಸೂತ್ರ.

ಕುತಂತ್ರ ಬಿಟ್ಟು ಬೆಂಬಲಿಸಿ ಯೋಗ್ಯ ಪ್ರಧಾನಿ ಅಭ್ಯರ್ಥಿಯನ್ನು,
ಅತಂತ್ರದಲ್ಲಿರಲಿಷ್ಟವಿದ್ದರೆ ಬೆಂಬಲಿಸಬಹುದು ಕೂಡ ಅಯೋಗ್ಯರನ್ನು.


- ಹರ್ಷ ಹೆಮ್ಮಾಡಿ.

Tuesday 17 September 2013

ನಂಬಿಕೆ

ಯಾರದೋ ಹಾಳೆಯ ಮೇಲೆ ಕಥೆ ಬರೆಯುತ್ತಿದ್ದ ನನಗೆ,
ಗೊತ್ತಾಗಿದ್ದು ಅವರ ಹೆಸರಲ್ಲೇ ಪ್ರಕಟವಾದಮೇಲೆ ಕೊನೆಗೆ.

ಎಲ್ಲಿಯೋ ಹುಟ್ಟಿ ಇನ್ನೆಲ್ಲಿಯೋ ಬೆಳೆಯುತ್ತೇವೆ,
ಯಾವುದನ್ನೋ ಬಯಸಿ ಇನ್ನ್ಯಾವುದನ್ನೋ ಪಡೆಯುತ್ತೇವೆ.

ನನ್ನ ಮೇಲೆ ನನಗಿಲ್ಲ ಇದುವರೆಗೆ ಯಾವ ಅನುಮಾನ,
ನನ್ನದು ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದಿರುವ ಜಾಯಮಾನ.  

ಯಾವತ್ತೂ ನನಗೆ ನಾ ಬಯಸುವುದೆಲ್ಲಾ ತುಂಬಾ ತಡವಾಗಿ ಸಿಗುತ್ತೆ,
ಇವತ್ತೂ ಅದೇ ನಂಬಿಕೆ ನನ್ನದದು ನನ್ನ ಬಳಿ ಬಂದೇ ಬರುತ್ತೆ.



- ಹರ್ಷ ಹೆಮ್ಮಾಡಿ.

Monday 16 September 2013

ಸ್ಫೂರ್ತಿ

ಕಾಡ ನೋಡ ಹೋದೆ,
ಕವಿತೆಯೊಡನೆ ಬಂದೆ.

ನನ್ನ ಕವಿತೆ ನೋಡಿ,
ಅವಳು ಬಂದಳು ಓಡಿ.

ನನ್ನ ಕನಸು ಇವಳು,
ಚಿನ್ನ ಒಳ್ಳೆ ಮನಸಿನವಳು.

ಅವಳಿಗೆ ಹೇಳ್ಬಿಟ್ಟೆ ಸೀದಾ,
ನೀನೆ ನನ್ನ ರಾಧಾ.

- ಹರ್ಷ ಹೆಮ್ಮಾಡಿ.

(ಸ್ಫೂರ್ತಿ: ಕಾಡ ನೋಡ ಹೋದೆ ಗೀತೆ)

ಹರ್ಷ ಉವಾಚ-೮

"ಎಲ್ಲಾ ನಲಿವಿನ ಹಿಂದೆ ಒಂದು ನೋವಿರುವುದು ಸಹಜ, ಜೀವನದಲ್ಲಿ ಬರೀ ಸಿಹಿಯೇ ಬೇಕು ಕಹಿ ಬೇಡವೆಂದರೆ ಆ ಜೀವನವೇ ಅಸಹಜ."


- ಹರ್ಷ ಹೆಮ್ಮಾಡಿ.

Friday 13 September 2013

ನನ್ನ ಹುಡುಗಿ

ಊರವರೆದುರೆಲ್ಲಾ ಅತೀ ಲಜ್ಜೆ, ಗಾಂಭೀರ್ಯದ ಬೆಡಗಿ,
ನನ್ನೆದುರು ಹುಚ್ಚುಕೊಡಿಯಂತಾಡುವಳು ನನ್ನ ಹುಡುಗಿ.

ಸದಾ ಹಸನ್ಮುಖಿಯವಳು ತುಂಬಾನೇ ಮಾಡುತ್ತಾಳೆ ಕೀಟಲೆ,
ಅವಳ ಮುಖನೋಡುತ್ತಲೇ ಮರೆಯುತ್ತೇನೆ ನನ್ನೆಲ್ಲಾ ಕಷ್ಟ ಕೋಟಲೆ.

ಅದ್ರಷ್ಟವಂತ ಕಣೆ ನಾನು ನೀ ಸಿಕ್ಕಿದೆ ಬೆಳಗಲು ನಮ್ಮನೆಯ ದೀಪ,
ಬಂಜರುಭೂಮಿಯಂತ ನನ್ನೆದೆಯಲ್ಲಿ ಬೆಳೆದೆ ನೀನು ಬಣ್ಣಬಣ್ಣದ ಪುಷ್ಪ.

ನಿನ್ನೊಂದಿಗೆ ನೂರುವರ್ಷ ನಗುನಗುತಾ ಬಾಳುವಾಸೆ ನಲ್ಲೆ ನನಗೆ,
ನಿನಗಿಂತ ಮೊದಲೇ ಸಾಯಬೇಕು ನಿನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ ಕೊನೆಗೆ.


- ಹರ್ಷ ಹೆಮ್ಮಾಡಿ.

ಮನಸ್ಸು

ನೊರೆಹಾಲಿಗಿಂತ ಬಿಳುಪು ಅವಳ ಮನಸ್ಸು,
ನೀರಿನ ಗುಳ್ಳೆಗಿಂತ ಅಲ್ಪಾಯುಷಿ ಅವಳ ಮುನಿಸು.

ಮೈಲಿಗಟ್ಟಲೆ ಕನಸು ಹೆಣೆದುಕೊಂಡಿರುವೆನು ನಿನ್ನ ಸುತ್ತಲು,
ಮೈಮನಕ್ಕೆ ಅದೇನೋ ಕಾತುರ ದಿನ ಆಗುತ್ತಿದ್ದಂತೆ ಕತ್ತಲು.

ಕಾಯುವವನಲ್ಲ ನಾನ್ಯಾರಿಗೂ ಕಾಯಿಸುವುದಿಲ್ಲ ನಾ ಯಾರನ್ನೂ,
ಅವಳು ಕಾಯಿಸಿ ನನ್ನ ಮುಂಗೋಪಕ್ಕೆ ನಿರ್ಧರಿಸಿದ್ದಾಳೆ ಕಾಯಿಸಬಾರದಿನ್ನು.

ಬಾಯಿಬಿರಿಯುವಷ್ಟು ಮಾತಾಡಬೇಕೆಂದುಕೊಳ್ಳುತ್ತೇನೆ ನಾ ನಿನ್ನ ಹಿಂದೆ,
ಬಾಯಿಬಾರದ ಮೂಗ ನಾನು ನೀ ಬಂದರೆ ನನ್ನ ಮುಂದೆ.


- ಹರ್ಷ ಹೆಮ್ಮಾಡಿ 

Wednesday 11 September 2013

ಭಾವಚಿತ್ರ

ನಿನ್ನ ಭಾವಚಿತ್ರ ನೋಡಿದಾಗಿಂದ ಕಣ್ತುಂಬಾ ತುಂಬಿಹುದು ಆ ಪ್ರತಿರೂಪ,
ರೆಪ್ಪೆ ಬಿಡಿಸಲು ಮನಸಾಗುತ್ತಿಲ್ಲ ಹೀಗಾಗಿದ್ದು ಬಹಳ ಅಪರೂಪ.

ಹೇಳಿದ್ದೆ ನಿನಗೆ ಬೇಡ ಈ ಸಲುಗೆ ಬರಬೇಡ ನನ್ನ ಸನಿಹ,
ನೋಡೀಗ ಏನಾಯ್ತು ನಿನ್ನ ನೆನಪಲ್ಲಿ ಶುರುವಾಯ್ತು ವಿರಹ.

ಹಾಸ್ಯ ಇಷ್ಟಪಡುತ್ತಿದ್ದವನಿಗೆ ಶ್ರಂಗಾರದತ್ತ ವಾಲುತ್ತಿದೆ ಮನ,
ನನಗೆ ತುಂಬಾ ಹತ್ತಿರವಾಗಬೇಡ ನಾ ನನ್ನೇ ಮರೆಯುವ ಭಯ ಪುನಃ.

ಎದೆಬಡಿತ ಹೆಚ್ಚುತ್ತಿದೆ ಬಂದಾಗಲೆಲ್ಲಾ ನಿನ್ನ ನೆನಪು,
ನೀ ಎದುರಿಗೆ ಬಂದರೆ ಕಲ್ಪನೆಗೂ ನಿಲುಕದ ಹೊಳಪು.


- ಹರ್ಷ ಹೆಮ್ಮಾಡಿ.

Tuesday 10 September 2013

ಮುಂಗುರುಳಿನ ಚೆಲುವೆ

ಇರುಳಲ್ಲಿ ನನ್ನ ಮರುಳು ಮಾಡಿದ ಮುಂಗುರುಳಿನ ಚೆಲುವೆ ಆಕೆ,
ಅವಳು ಟೊಂಕ ಕಟ್ಟಿದಂತಿತ್ತು ನನ್ನಿಂದ ಪ್ರೇಮರಾಗ ಹಾಡಿಸೋಕೆ.

ಅವಳ ಪಟಪಟಾಕಿ ಮಾತಿಗೆ ಕಲ್ಲಿನಂತ ನಾನು ಕರಗಿ ನೀರಾದೆ,
ಭಯದ ಚಳಿ ಇರೋದ್ರಿಂದ ಮತ್ತೆ ಹೆಪ್ಪುಗಟ್ಟದಿರಲಿ ಎನ್ನುವ ಇರಾದೆ.

ಪೂರ್ವನಿಯೋಜಿತ ಈ ಬಾಳಲ್ಲಿ ಅವಳು ನನಗೆ ಸಿಗುತ್ತಾಳೋ ಸಿಗಲ್ವೋ ಗೊತ್ತಿಲ್ಲ,
ಸಿಕ್ಕಿದರೂ ಸಿಗದಿದ್ದರೂ ಕೊನೆಯುಸಿರಿರುವವರೆಗೂ ಅವಳನ್ನು ಪ್ರೀತಿಸುವುದು ನಿಲ್ಲಿಸಲ್ಲ.

ಅವಳಿಂದಾಗಿ ಇಡೀ ರಾತ್ರಿ ನನ್ನ ನಿದ್ದೆ ಮಾಡಿತು ಮುಷ್ಕರ,
ನನ್ನ ನಿದ್ದೆ ಕದ್ದ ಗೆಳತಿ ಈ ಕವನ ನಿನಗೋಸ್ಕರ.


- ಹರ್ಷ ಹೆಮ್ಮಾಡಿ.

Sunday 8 September 2013

ಭಗವಂತ

ಹೆಚ್ಚು ಕಮ್ಮಿ ಎಲ್ಲಾ ಮನುಷ್ಯ ಇಲ್ಲಿ ಭಾವನೆಗಳಿಗೆ ಬಣ್ಣ ಹಚ್ಚಿ ಬದುಕುತ್ತಿರುವವನು,
ದೇವರ ಸೃಷ್ಟಿಯೇ ವಿಚಿತ್ರ ಅನಿಸುವಂತದ್ದು ಕೊಟ್ಟು ಕಸಿದು ನಮ್ಮನ್ನು ಆಡಿಸುವನು.

ಹೊಟ್ಟೆ ತುಂಬಿದವನು ತಿನ್ನುತ್ತಲೇ ಕುಳಿತಿದ್ದಾನೆ,
ಹಸಿದ ಹೊಟ್ಟೆಯಲ್ಲಿರುವವನು ಹಸಿದುಕೊಂಡೇ ಮಲಗಿದ್ದಾನೆ.

ಕೇಳುತ್ತಿಲ್ಲವೇ ದೇವರಿಗೆ ಹಸಿದವನ ಹವಣಿಕೆ,
ಅವನಿರುವುದೇ ಹೌದಾದರೆ ಈ ತಾರತಮ್ಯ ಯಾಕೆ.

ಪುರಾಣ ಹೇಳುತ್ತದೆ ಪಾಪ ಹೆಚ್ಚಾದರೆ ಭಗವಂತ ಅವತರಿಸುತ್ತಾನೆ ಕೊಡಿಸಲು ನ್ಯಾಯ,
ಇನ್ನೂ ಯಾಕೆ ಅವತರಿಸಿಲ್ಲ ಬಹುಶಃ ಭಗವಂತನಿಗೂ ಕಾಡುತ್ತಿರುವುದೇ ಪಾಪಿಗಳ ಭಯ.


- ಹರ್ಷ ಹೆಮ್ಮಾಡಿ.

ಅಹಂ

ನೆತ್ತಿಗೇರದಿರಲಿ ಅಹಂ ಎನ್ನುವ ಪಿತ್ತ,
ಕಳೆದುಕೊಳ್ಳದೇ ಬದುಕು ನೀ ಮಾನವನೆಂಬ ಚಿತ್ತ.

ದ್ವೇಷದ ಕಿಡಿಕಾರಿಕೊಂಡು ಸಾಗುವೆ ನೀ ಎತ್ತ,
ದಯೆಯಿರಲಿ ಕಂಗಳಲ್ಲಿ ಎಲ್ಲರಿರುವರು ನಿನ್ನ ಸುತ್ತ.

ಜಗತ್ತು ಸುಲಭವಿಲ್ಲ ಇಲ್ಲಿರುವುದು ಹಲವು ಹಾವಿನ ಹುತ್ತ,
ತುತ್ತು ಗಿಟ್ಟಿಸಿಕೊಳ್ಳಲು ನೀ ಬೆಳಿಬೇಕು ಇಲ್ಲಿ ಪ್ರೀತಿಯೆಂಬ ಭತ್ತ.

ಗರ್ವದಿಂದ ಮೆರೆದಾಡಿದ ಅದೆಷ್ಟೋ ಮನುಷ್ಯ ಇಲ್ಲಿ ಹುಟ್ಟಿ ಸತ್ತ,
ಸ್ವಾರ್ಥವಿಲ್ಲದೆ ಬದುಕು ಸಾಯುವಾಗ ಹೊತ್ತೋಗಲು ಸಾಧ್ಯವೇ ನಾವು ಮಾಡುವ ಸ್ವತ್ತ.


- ಹರ್ಷ ಹೆಮ್ಮಾಡಿ.

Friday 6 September 2013

ಹರ್ಷ ಉವಾಚ-೭

“ ಕಣ್ಣು ಎಲ್ಲಾ ಜೀವಿಯ ದೇಹದಲ್ಲಿ ಅತೀ ಅದೃಷ್ಟ ಮಾಡಿರುವ ಭಾಗ, ತನ್ನೆದುರಿಗೆ ಸುಳಿದ ಬಹುತೇಕ ಸಂಗತಿಗಳನ್ನು ಗಿಟ್ಟಿಸಿಕೊಳ್ಳುವ ಅವಕಾಶವಿರುವುದು ಕಣ್ಣಿಗೆ ಮಾತ್ರ "

-ಹರ್ಷ ಹೆಮ್ಮಾಡಿ. 

Wednesday 4 September 2013

ಅವಳು

ಅವಳೊಂದು ಅಧ್ಬುತ ಬಣ್ಣದ ಹೂವು,
ಮುಖನೋಡಿದರೆ ಮರೆಯಾಗುತ್ತಿತ್ತು ಎಲ್ಲಾ ನೋವು.

ಅವಳೊಂದು ಇಂಪಾದ ಸಂಗೀತ,
ಅವಳಲ್ಲಿ ಮಾತನಾಡಿದರೆ ಪೂರೈಸಿಕೊಂಡಂತೆ ಮನದ ಇಂಗಿತ.

ಅವಳೊಂದು ಬ್ರಹ್ಮನ ವರ್ಣನಾತೀತ ಕೆತ್ತನೆ,
ಅವಳ ದರ್ಶನದಿಂದ ಇವನೆದೆಯಲ್ಲಿ ಹಲವು ಕನಸುಗಳ ಬಿತ್ತನೆ.

ಅವಳೊಂದು ಮಹಾಕವಿಯ ಕಲ್ಪನೆ,
ಅವಳನ್ನು ಹೊಗಳಿ ಮುಗಿಸಲು ಸಾಧ್ಯವಿಲ್ಲ ಸ್ವಲ್ಪ ಸ್ವಲ್ಪನೆ.


- ಹರ್ಷ ಹೆಮ್ಮಾಡಿ.

Monday 2 September 2013

ಬಾಳು

ದ್ವಂಧ್ವದ ಬಾಳು ಇದು ನಮ್ಮ ಜೊತೆಗೇ ಮಾಡುತ್ತೆ ಕುಸ್ತಿ,
ಬೇಕೆಂದಾಗ ಯಾವುದೂ ಸಿಗದೇ ಬೇಡವೆಂದಾಗ ಸಿಗೋದೇ ಜಾಸ್ತಿ.

ನಿನ್ನೆ ರಾತ್ರಿ ಬೇಗ ಮಲಗಿದ್ದೆ ಆದರೆ ಕಣ್ಣಿಗೆ ನಿದ್ದೆ ಹತ್ತಿದ್ದು ಮಾತ್ರ ಬೆಳಗಿನ ಜಾವ ೨ ಗಂಟೆಗೆ,
ಬೆಳಿಗ್ಗೆ ಬೇಗ ಏಳಬೇಕೆಂದರೆ ನಿದ್ದೆ ನನ್ನೊಂದಿಗೆ ನಿಂತಿತ್ತು ತಂಟೆಗೆ.

ಇದೊಂಥರಾ ತುಂಬಾ ಮೋಸ ಮತ್ತು ಕಹಿ ಅಲ್ವಾ,
ಮಧುಮೇಹಿ ಬಾಯಿಗೆ ತುರುಕಿದಂತೆ ಸಿಹಿ ಹಲ್ವಾ.

ಅದಕ್ಕೇ ಭಟ್ರು ಹೇಳಿರೋದು ಬಾಳು ಅಂದ್ರೆ ಏನು ಅಂತ ಹೇಳಲೇ,
ಮೆಡಿಸಿನ್ನೇ ಇಲ್ದೇ ಇರೋ ಕಾಯಿಲೆ. 


- ಹರ್ಷ ಹೆಮ್ಮಾಡಿ.