Monday 25 November 2013

ಮೂಲಭೂತ ಸೌಕರ್ಯ

ದಿನನಿತ್ಯ ಸತ್ತು ಬದುಕಿ ಅಳುತ್ತಿರುವವರಿವರು,
ಸತ್ತಂತೆ ಬದುಕಿ ನಮ್ಮನ್ನು ಆಳುತ್ತಿರುವವರವರು.

ಬಸ್ ನಿಲ್ದಾಣ,ರಸ್ತೆ ಬದಿಯೇ ಇವರಿಗೆ ಮಹಲು,
ಕೇಳಿಸಿದರೂ ಕೇಳದಂತಿದ್ದಾರೆ ಆಳುವವರಿವರಳಲು.

ಬಹುಶಃ ಇಂಥವರು ಸರ್ಕಾರದ ಗಣತಿಗೂ ಸಿಗರು,
ಯಾಕೆಂದರೆ ಇವರು ಯಾವ ಗುರುತುಪತ್ರ ಹೊಂದಿರರು.

ಯಾವ ಸರ್ಕಾರ ಏನೇನೋ ಸಾಧಿಸಿದರೇನು ಪ್ರಯೋಜನ,
ಮೂಲಭೂತ ಸೌಕರ್ಯವನ್ನೇ ಪಡೆಯದಮೇಲೆ ಎಲ್ಲಾ ಜನ. 


- ಹರ್ಷ ಹೆಮ್ಮಾಡಿ.

Friday 22 November 2013

ಜನನ - ಮರಣ

ಯಾಕಾಯ್ತೋ ಗೊತ್ತಿಲ್ಲ ಇಲ್ಲಿ ನಮ್ಮಲ್ಲೆರ ಜನನ,
ಆದರೆ ಏನಾದ್ರೂ ಮಾಡ್ಬೇಕು ಆಗೋದ್ರೊಳಗೆ ಮರಣ.

ಹುಟ್ಟಿನಿಂದ ಸಾಯೋವರೆಗೂ ಸ್ವಾರ್ಥ ಬಿಡಲ್ಲ ಈ ಜನ,
ಎಷ್ಟೆಷ್ಟೋ ಕೂಡಿಡ್ತೀವಿ ಅದರಿಂದಾಗ್ಬೇಕು ಪ್ರಯೋಜನ.

ಹೋದಮೇಲೂ ಉಸಿರು ಹಸಿರಾಗಿರಬೇಕಾದರೆ ಹೆಸರು,
ದಾನಿಯಾಗು ತುಂಬಬಹುದು ಅದೆಷ್ಟೋ ಹಸಿದ ಬಸಿರು.

ಹುಟ್ಟು ಇಲ್ಲಿಗೆ ಉಪಯೋಗವಾದರೆ ಅದಕ್ಕೊಂದು ಅರ್ಥ,
ಹಾಗೇ ಹುಟ್ಟಿ ಹೀಗೇ ಸತ್ತರೇ ಅದು ಕೇವಲ ವ್ಯರ್ಥ.


- ಹರ್ಷ ಹೆಮ್ಮಾಡಿ.

Monday 18 November 2013

ಯಾರೇ ನೀನು

ಯಾರೇ ನೀನು ನನ್ನ ಕನಸಿನಲ್ಲಿ ಬರುವ ಕನ್ಯೆ,
ನನಸಿನಲ್ಲೂ ನೋಡುವಾಸೆ ಆ ನಿನ್ನ ಕಣ್ಸನ್ನೆ.

ಯಾರೇ ನೀನು ನನ್ನ ಮನೆ ಮನದೊಡತಿ,
ಕಣ್ಣುಮುಚ್ಚಲೂ ಬಿಡದೇ ಯಾಕಿಂಗೆ ಕಾಡುತಿ.

ಯಾರೇ ನೀನು ನನ್ನ ಮನಸೆಳೆದ ಅಭಿಸಾರಿಕಾ,
ಅಮಾವಾಸ್ಯೆ ರಾತ್ರಿಯಲ್ಲೂ ಕಂಡ ನಿಹಾರಿಕಾ.

ಯಾರೇ ನೀನು ನನ್ನ ಅರಸಿ ಬಾ ನನ್ನ ಬಳಿಗೆ,
ಎಂದು ಬರುವುದೋ ನಿನ್ನ ನೋಡುವ ಘಳಿಗೆ.


- ಹರ್ಷ ಹೆಮ್ಮಾಡಿ.

Thursday 14 November 2013

ಪಂಚೇಂದ್ರಿಯ

ಕುರುಡು ನಾನು ಅಂದುಕೊಂಡಿದ್ದೆ ನೀ ನನ್ನ ಕಣ್ಣು,
ಕೊರಡು ನೀನು ತಿನ್ನಿಸಿದೆಯಲ್ಲೇ ನನಗೆ ಮಣ್ಣು.

ಕಣ್ಣಿರಲಿ ನಾಸಿಕವೂ ಗ್ರಹಿಸಲಿಲ್ಲ ನಿನ್ನ ಕಪಟದ ಗಂಧ,
ಚುಂಬಿಸಿದಾಗಲೂ ರುಚಿಸಲಿಲ್ಲ ನಾಲಿಗೆಯ ಸುಳ್ಳಿನ ಬಂಧ.

ನಿನ್ನ ಸುಳ್ಳುನುಡಿಗಳನ್ನು ಸೂಳ್ನುಡಿಗಳಂತೆ ಭಾವಿಸಿತ್ತಂದು ನನ್ನ ಕಿವಿ,
ಅಂದು ಸುಳ್ಳೆಂದು ಗೊತ್ತಿದ್ದಿದ್ದರೆ ಇಂದು ನಾನಾಗುತ್ತಿರಲಿಲ್ಲವೇನೋ ಕವಿ.

ಅಂದು ನನಗೆ ತುಂಬಾ ಮೃದುವಾಗಿತ್ತು ನಿನ್ನ ಒರಟು ಸ್ಪರ್ಷ,
ಪಂಚೇಂದ್ರಿಯಗಳೇ ನಿಷ್ಕ್ರಿಯೆಗೊಂಡು ಮೋಸಹೋದ ಈ ಹರ್ಷ.


- ಹರ್ಷ ಹೆಮ್ಮಾಡಿ.

Thursday 7 November 2013

ಸಂಜೆ

ನಿನ್ನ ನೆನಪಿಸಲು ಮತ್ತೆ ಮತ್ತೆ ಯಾಕೆ ಬರುತ್ತೆ ಈ ಸಂಜೆ,
ಗೆಳತಿ ನೀನಿಲ್ಲದ ಸಂಜೆ ಕಳೆಯುವುದೇ ನನಗೊಂದು ಸಜೆ.

ಹಗಲಲ್ಲಿ ಹಿಡಿದಿಟ್ಟಿರುವ ಆಸೆಗಳು ಸಿಗದ್ಯಾಕೆ ಸಂಜೆ ಹತೋಟಿಗೆ,
ಕೊಡಬಹುದೇ ಪರಿಹಾರ ನಲ್ಲೆ ನೀ ನನ್ನ ಈ ಪಚೀತಿಗೆ.

ಅಪರೂಪಕ್ಕೆ ಮರುಭೂಮಿಯಲ್ಲಿ ಕಾಣುವ ಮರೀಚಿಕೆ ಹಾಗೆ,
ನೀ ಬಂದುಹೋದ ಈ ಬಾಳಲ್ಲಿ ಈಗ ಬರೀ ವಿರಹದ ಬೇಗೆ.

ಗೊತ್ತಿಲ್ಲ ನನಗೆ ಹೀಗ್ಯಾಕೆಂದು ನಿನ್ನ ನೆನಪು ಬಂದರೆ ಸಾಕು,
ಕನಸಲ್ಲಾದರೂ ಒಮ್ಮೆ ಬಂದು ಈ ನೋವುಗಳ ದೂರನೂಕು.


- ಹರ್ಷ ಹೆಮ್ಮಾಡಿ.